ಸಂದಿಗ್ಧ ಪರಿಸ್ಥಿತಿಯಲ್ಲೂ ಜಾತಿ ರಾಜಕಾರಣ ಸರಿಯಲ್ಲ : ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಸಮಾಧಾನ

May 6, 2021

ಮಡಿಕೇರಿ ಮೇ 6 : ಕೋವಿಡ್ ಸೋಂಕು ನಿಯಂತ್ರಣ ಮೀರಿ ದೇಶವ್ಯಾಪಿ ವ್ಯಾಪಿಸುತ್ತಿದ್ದು, ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ನಡು ರಸ್ತೆಯಲ್ಲೇ ನರಳುತ್ತಿದ್ದಾರೆ. ಸೋಂಕಿತರಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ವಿಫಲವಾಗಿರುವ ಸರ್ಕಾರ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಭಾಷಾ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿದಿನ ದೇಶದಲ್ಲಿ ಕೋವಿಡ್ ಸೋಂಕಿನಿAದ ಸಾವಿರಾರು ಮಂದಿ ಮೃತರಾಗುತ್ತಿದ್ದು, ಬಿಜೆಪಿ ಸರ್ಕಾರ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಈ ಸಂಕಷ್ಟದ ಪರಿಸ್ಥಿತಿಯನ್ನು ಕೂಡ ಜಾತಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕೊರೋನಾದ ಎರಡನೇ ಅಲೆ ವ್ಯಾಪಾಕವಾಗಿ ಹರಡಿ ಜನ ಸಾಯುತ್ತಿರುವ ಬಗ್ಗೆ ಕಳೆದ ಒಂದು ತಿಂಗಳಿನಿAದ ವಿಶ್ವವ್ಯಾಪಿ ಸುದ್ದಿಯಾಗಿದೆ. ಆದರೆ ನಮ್ಮ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಅವರು ಈಗಷ್ಟೆ ಬಂದು ಭಾರೀ ಕಾಳಜಿ ಇರುವಂತೆ ವರ್ತಿಸುತ್ತಿದ್ದಾರೆ. ಇಷ್ಟು ದಿನ ರಾಜ್ಯದಲ್ಲೇ ಇರದ ಸಂಸದರು ಪಂಚರಾಜ್ಯಗಳ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದು, ಇದು ಕರ್ನಾಟಕದ ಜನರ ಮೇಲೆ ಇವರಿಗಿರುವ ಆಸಕ್ತಿಯೇ ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಸೋಂಕು 2ನೇ ಅಲೆಯಾಗಿ ಅತಿರೇಕಗೊಳ್ಳಲು ಪಂಚರಾಜ್ಯಗಳ ಚುನಾವಣೆಯಲ್ಲಿ ಸೇರಿದ್ದ ಜನಸಾಗರವೇ ಕಾರಣವಾಗಿದೆ. ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್ ಷಾ ಅವರುಗಳ ಪಾಲ್ಗೊಂಡಿದ್ದ ರ‍್ಯಾಲಿಗಳಲ್ಲಿ ಲಕ್ಷಾಂತರ ಜನರು ಸೇರಿದ್ದರು. ರಾಜ್ಯದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಂಘ ಪರಿವಾರದವರು ಕೂಡ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣಾ ರ‍್ಯಾಲಿಗಳಿಂದಲೇ ಸೋಂಕು ವ್ಯಾಪಿಸಿರುವ ಕುರಿತು ಸತ್ಯಾಂಶವನ್ನು ಯಾರೂ ಬಹಿರಂಗಪಡಿಸುತ್ತಿಲ್ಲ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸುಮಾರು 24 ಮಂದಿ ಮೃತಪಟ್ಟಿದ್ದಾರೆ. ಕೊರತೆಗಳನ್ನು ನೀಗಿಸುವ ಮತ್ತು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಸಂಘಟಿತ ಒಗ್ಗಟ್ಟಿನ ಪ್ರಯತ್ನಗಳನ್ನು ಮಾಡುವ ಬದಲಿಗೆ ಜಾತಿ ರಾಜಕಾರಣ ಮಾಡಲಾಗುತ್ತಿದೆ ಎಂದು ಖಲೀಲ್ ಭಾಷಾ ಆರೋಪಿಸಿದ್ದಾರೆ.
ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ ಅವರು ಸುಮಾರು 250 ಮಂದಿ ಗುತ್ತಿಗೆ ಆಧಾರದ ನೌಕರರಲ್ಲಿ 17 ಅಲ್ಪಸಂಖ್ಯಾತ ಸಿಬ್ಬಂದಿಗಳ ಹೆಸರುಗಳನ್ನು ಮಾತ್ರ ಹೇಳುವ ಮೂಲಕ ಇಡೀ ವ್ಯವಸ್ಥೆಗೆ ಜಾತಿಯ ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿರುವ ಅವರು ಈ ಕ್ರಮವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಇಡೀ ದೇಶದ ಜನ ಜಾತಿ, ಮತ, ಧರ್ಮ ಮರೆತು ಕೋವಿಡ್ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ವಿದೇಶಗಳಿಂದಲೂ ಭಾರತಕ್ಕೆ ನೆರವಿನ ಹಸ್ತ ದೊರೆತ್ತಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ವೈರತ್ವಗಳನ್ನು ಮರೆತು ಸಮಸ್ಯೆಗಳ ನಿರ್ಮೂಲನೆಗೆ ಸಹಕರಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಜನಪ್ರತಿನಿಧಿಗಳು ಎನಿಸಿಕೊಂಡವರು ಪ್ರತಿಯೊಂದು ವಿಚಾರದಲ್ಲೂ ಜಾತಿಯನ್ನು ಎಳೆದು ತಂದು ಇಡೀ ಪರಿಸ್ಥಿತಿಯನ್ನು ಹಾಳುಗೆಡಹುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋವಿಡ್ ಕರ್ಫ್ಯೂ ನಿಯಮ ಜಾರಿಯಿಂದ ಬಡವರು, ಕಾರ್ಮಿಕರು, ಜನಸಾಮಾನ್ಯರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಮೊದಲಾದವರು ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಮೂರು ಹೊತ್ತಿನ ಊಟಕ್ಕೂ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಸೋಂಕಿತರು ಆಂಬ್ಯುಲೆನ್ಸ್, ಆಕ್ಸಿಜನ್, ಹಾಸಿಗೆ ಇಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಈ ಕೊರತೆಗಳ ಬಗ್ಗೆ ಮೊದಲು ಗಮನಹರಿಸುವ ಮೂಲಕ ಮಾನವೀಯತೆ ಮೆರೆಯಬೇಕೆ ಹೊರತು ಜಾತಿ ರಾಜಕಾರಣಕ್ಕೆ ಇದು ಸಕಾಲವಲ್ಲವೆಂದು ಖಲೀಲ್ ಭಾಷಾ ತಿಳಿಸಿದ್ದಾರೆ. ಫೋಟೋ :: ಖಲೀಲ್ ಭಾಷಾ

error: Content is protected !!