ಕೊಡಗಿನಲ್ಲಿ ಕೋವಿಡ್ : ಉಸ್ತುವಾರಿ ಸಚಿವರು ಈ ಭರವಸೆಗಳನ್ನು ನೀಡಿದ್ದಾರೆ

06/05/2021

ಮಡಿಕೇರಿ ಮೇ 6 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಪೂರಕವಾಗಿ ಮುಂದಿನವಾರ ಹೆಚ್ಚುವರಿ 250 ಬೆಡ್‌ಗಳ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ತಿಳಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಮಡಿಕೇರಿಯ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಮಡಿಕೇರಿಯ ವೈದ್ಯಕೀಯ ಕಾಲೇಜಿನಲ್ಲಿ ಇಂದಿನ ಅಗತ್ಯತೆಗೆ ತಕ್ಕಂತೆ 200 ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಇದೇ ರೀತಿ ವಿರಾಜಪೇಟೆ, ಸೋಮವಾರಪೇಟೆ , ಪಾಲಿಬೆಟ್ಟ, ಕುಶಾಲನಗರದಲ್ಲಿ ಹೆಚ್ಚುವರಿ ಬೆಡ್‌ಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ನಿರೀಕ್ಷೆಗೂ ಹೆಚ್ಚಿನ ಬೆಡ್‌ಗಳ ವ್ಯವಸ್ಥೆಯ ವಿಶ್ವಾಸ ವ್ಯಕ್ತಪಡಿಸಿದರು.
ವೈದ್ಯರು-ದಾದಿಯರ ನೇಮಕಕ್ಕೆ ಕ್ರಮ- ಕೊಡಗು ಜಿಲ್ಲೆಗೆ ಅಗತ್ಯವಿರುವ ವೈದ್ಯರು, ದಾದಿಯರ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡುತ್ತಾ ತಿಳಿಸಿದರು.
ವಿರಾಜಪೇಟೆ ಕೋವಿಡ್ ಆರೈಕೆ ಕೇಂದ್ರದಲ್ಲಿ 51 ಆಕ್ಸಿಜನ್ ಬೆಡ್ ಗಳು ಈಗ ಇದೆ. ಹೆಚ್ಚುವರಿಯಾಗಿ 30 ಬೆಡ್ ಗಳನ್ನು ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಎರಡು ದಿನ ಮಾತ್ರ ಅಂಗಡಿಗಳನ್ನು ತೆರೆಯುವ ನಿರ್ಧಾರ ಸೂಕ್ತವಾದ ಪ್ರತಿಫಲ ನೀಡುವ ನಿರೀಕ್ಷೆ ಇದೆ. ಇದರಿಂದಾಗಿ ಕೆಲ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಬಹುದು ಎಂಬ ಆಶಾಭಾವನೆಯನ್ನು ಸಚಿವರು ವ್ಯಕ್ತಪಡಿಸಿದರು.
ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರವನ್ನು ಪಾಲಿಸಬೇಕು. ಆ ಮೂಲಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಿ ಎಂದೂ ಸಚಿವ ಸೋಮಣ್ಣ ಕೊಡಗಿನ ಜನತೆಯಲ್ಲಿ ಮನವಿ ಮಾಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ, ಸಂಸದರಾದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ರವಿಕುಶಾಲಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಜಿಲ್ಲಾಧಿಕಾರಿ ಚಾರುಲತ ಸೋಮಲ್ ಇದ್ದರು.