ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ತೀವ್ರ ಅಸಮಾಧಾನ

May 8, 2021

ಮಡಿಕೇರಿ ಮೇ 8 : ಕೊರೊನಾ ಹಾಗೂ ಲಾಕ್‌ಡೌನ್‌ನಿಂದ ಕಂಗಾಲಾಗಿರುವ ವರ್ತಕರ ಸಮುದಾಯದ ವಿರುದ್ಧ ಮಡಿಕೇರಿಯಲ್ಲಿ ಪೊಲೀಸರು ಅನವಶ್ಯಕ ಮೊಕದ್ದಮೆ ದಾಖಲಿಸುತ್ತಿದ್ದು, ಈ ಬಗ್ಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಮಡಿಕೇರಿ ಸ್ಥಾನೀಯ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಅಂಗಡಿ ಮುಂಗಟ್ಟುಗಳ ಎದುರು ನಿಯಮ ಪಾಲಿಸದೆ ಗುಂಪು ಗುಂಪಾಗಿ ಜನ ಸೇರುತ್ತಿದ್ದು, ಅಂತಹ ಸಂದರ್ಭ ವರ್ತಕರನ್ನು ಗುರಿಯಾಗಿಸಿ ಪೊಲೀಸರು ವಿವಿಧ ಕಾನೂನಿನಡಿ ಎಫ್‌ಐಆರ್ ದಾಖಲಿಸುತ್ತಿದ್ದು, ವರ್ತಕರ ಮೇಲಿನ ದಬ್ಬಾಳಿಕೆಯನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿದೆ.
ತಾ. 7ರ ಶುಕ್ರವಾರದಂದು ಮಡಿಕೇರಿಯಲ್ಲಿ ನಿರೀಕ್ಷೆಗೂ ಮೀರಿದ ಜನಸಂದಣಿ ಉಂಟಾಗಿ ವ್ಯಾಪಾರಸ್ಥರು ಕೂಡ ತೊಂದರೆ ಅನುಭವಿಸಬೇಕಾಯಿತು. ಅಂಗಡಿ ಮುಂಗಟ್ಟುಗಳ ಎದುರು ಜನ ಮುಗಿಬಿದ್ದು ಆಹಾರ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ವರ್ತಕರ ಮನವಿಗೆ ಸ್ಪಂದಿಸದ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವರ್ತಕರ ಮೇಲೆ ಮೊಕದ್ದಮೆ ದಾಖಲಿಸಿ ಇದೀಗ ನ್ಯಾಯಾಲಯ ಅಲೆಯುವಂತೆ ಮಾಡಿರುವುದು ಎಷ್ಟು ನ್ಯಾಯ ಎಂದು ಚೇಂಬರ್ ಪ್ರಶ್ನಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ವರ್ತಕರೊಂದಿಗೆ ಸೌಜನ್ಯದಲ್ಲಿ ವರ್ತಿಸಿದರೂ, ಕೆಲವು ಕಿರಿಯ ಅಧಿಕಾರಿಗಳು ವರ್ತಕರನ್ನು ತುಚ್ಛವಾಗಿ ಏಕವಚನದಲ್ಲಿ ಸಂಭೋದಿಸಿ, ಅಂಗಡಿಯಿAದ ಹೊರ ಬರುವಂತೆ ಆದೇಶಿಸಿ ದಂಡ ವಿಧಿಸಿದ್ದು, ಇದರಿಂದ ವರ್ತಕರ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಚೇಂಬರ್ ಅಸಮಾಧಾನ ವ್ತಕ್ತಪಡಿಸಿದೆ.
ಘಟನೆ ಕುರಿತು ಇಂದು ಅಂತರ್ಜಾಲ ಮೂಲಕ ಸಭೆ ನಡೆಸಿದ ಪದಾಧಿಕಾರಿಗಳು ಹಲವು ಪೊಲೀಸರ ವರ್ತನೆ ಹಾಗೂ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ಮಡಿಕೇರಿಯಲ್ಲಿ ಅಂಗಡಿಗಳನ್ನು ತೆರೆಯದೆ ಪ್ರತಿಭಟಿಸುವ ಅಭಿಪ್ರಾಯಗಳೂ ಕೇಳಿ ಬಂದವು. ವ್ಯಾಪಾರಿಗಳು ವ್ಯಾಪಾರದ ಜೊತೆ ಪರೋಕ್ಷವಾಗಿ ವಾರಿಯರ್ಸ್ ರೀತಿಯಲ್ಲಿಯೇ ಜನ ಸೇವೆ ಮಾಡುತ್ತಿರುವುದನ್ನು ಜನತೆ ಹಾಗೂ ಆಡಳಿತ ಅರ್ಥೈಸಿಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿತು. ವರ್ತಕರು ಸಹ ಅಂಗಡಿ ಎದುರು ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಿಳಿ ಬಣ್ಣದಲ್ಲಿ ಗುರುತು ಹಾಕುವಂತೆ ಸೂಚಿಸಲು ನಿರ್ಧರಿಸಲಾಯಿತು.
ಸಭೆಯ ಬಳಿಕ ಡಿವೈಎಸ್‌ಪಿ ಬಾರಿಕೆ ದಿನೇಶ್ ಕುಮಾರ್ ಅವರನ್ನು ಚೇಂಬರ್ ನಿಯೋಗ ಭೇಟಿ ಮಾಡಿ ಬೆಳವಣಿಗೆ ಕುರಿತು ಚರ್ಚಿಸಿತು. ಕಳೆದ ವರ್ಷ ವರ್ತಕರು, ಪೊಲೀಸರು ಹಾಗೂ ಆಡಳಿತ ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸಿದಂತೆ ಈಗಲೂ ಮುಂದುವರಿಯುವ ಆಶಯ ವ್ಯಕ್ತಪಡಿಸಿತು. ವರ್ತಕರಿಗೆ ಜನರ ಸಾಲುಗಳನ್ನು ನಿಯಂತ್ರಿಸುವುದು ಕಷ್ಟವಾಗಿದ್ದು, ಪೊಲೀಸರು ಸಹಕರಿಸುವಂತೆ ಕೋರಲಾಯಿತು. ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದ ಎಲ್ಲೆಲ್ಲೂ ಸಾಲು ವ್ಯವಸ್ಥೆಗೆ ಈ ಹಿಂದಿನAತೆ ಪೊಲೀಸರನ್ನು ನಿಯೋಜಿಸಲು ಕಷ್ಟವಾಗಿದ್ದು, ಹೋಂಗಾರ್ಡ್ಗಳ ಕೊರತೆಯೂ ಇದೆ ಎಂದು ದಿನೇಶ್ ಅವರು ವಿವರಿಸಿದರು.
ನಿಯೋಗದಲ್ಲಿ ಮಡಿಕೇರಿ ಸ್ಥಾನೀಯ ಸಮಿತಿ ಅಧ್ಯಕ್ಷ ಧನಂಜಯ್, ಕಾರ್ಯದರ್ಶಿ ಸಂತೋಷ್ ಅಣ್ವೇಕರ್, ಜಿಲ್ಲಾ ಚೇಂಬರ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್, ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ನಗರ ಸಮಿತಿ ಪದಾಧಿಕಾರಿಗಳಾದ ಅರವಿಂದ್ ಕೆಂಚೆಟ್ಟಿ, ಕಬೀರ್ ಪಾಲ್ಗೊಂಡಿದ್ದರು.

error: Content is protected !!