ಕೊಡಗು ಮತ್ತು ಕರ್ನಾಟಕದ ಇಂದಿನ ಈ ಸ್ಥಿತಿಗೆ ಆ ಶಿವಲಿಂಗ ಕಾರಣವೇ ! ?

May 8, 2021

***** ಇಂಗುಗುಂಡಿ ಮುಚ್ಚಿವೆ : ಶಿವಲಿಂಗ ಗಮನಿಸಿ
ತಿಳಿದವರಾಡಿದರು ಆಡಳಿತಕಾರರು ಗಂಭೀರ ವಿಚಾರಗಳನ್ನು ಕಣ್ಮುಚ್ಚಿ ಕುಳಿತು ನಿರ್ಲಕ್ಷ್ಯ ಮಾಡಬಾರದು *******
ತಲಕಾವೇರಿಯಲ್ಲಿ ಕಳೆದ ಮಳೆಗಾಲದಲ್ಲಿ ಗಜಗಿರಿ ಬೆಟ್ಟ ಕುಸಿದು ಮನೆಗಳು ಸಮಾಧಿಗೊಂಡು ಅರ್ಚಕ ಕುಟುಂಬದ ಐವರು ಸಾವಿಗೀಡಾದರು. ಬಳಿಕ ಭೂವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಅತಿ ಮಳೆ, ಗಾಳಿ ಮಾತ್ರ ಕಾರಣವಲ್ಲದೆ, ಗಜಗಿರಿಯಲ್ಲಿ ಕೊರೆದಿದ್ದ ಇಂಗುಗುಂಡಿಗಳೂ ಬೆಟ್ಟ ಕುಸಿತಕ್ಕೆ ಕಾರಣವಾಗಿರುವ ಕುರಿತು  ವರದಿ ನೀಡಲ್ಪಟ್ಟಿತು.  ಈ ಹಿಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಈ ಇಂಗುಗುಂಡಿಗಳನ್ನು ಮುಚ್ಚುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಇಲಾಖೆಯ ಜಿಲ್ಲಾ ಮಟ್ಟದ ಅದಿಕಾರಿಗಳು ರಾಜ್ಯ ಮಟ್ಟದ ಅಧಿಕಾರಿಗಳ ಅನುಮತಿ ಪಡೆದು 650 ಇಂಗುಗುಂಡಿಗಳನ್ನು ಇತ್ತೀಚೆಗೆ ಮುಚ್ಚಿರುವದು ನಿಜಕ್ಕೂ ಸ್ವಾಗತಾರ್ಹ
ಇದೀಗ ಆ ಸ್ಥಳದಲ್ಲಿ ಗಿಡ ಮರಗಳ ಪೋಷಣೆ, ವೆಟಿವರ್ ಎಂಬ ಹುಲ್ಲನ್ನು ಬೆಳೆಸುವದೇ ಮೊದಲಾದ ಆಶಾದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ, ಮುಂದಿನ ಮಳೆಗಾಲ ಪ್ರಾರಂಭಕ್ಕೆ ಮುನ್ನವೇ ಇಂಗುಗುಂಡಿಗಳನ್ನು ಮುಚ್ಚಿ ಸ್ಥಳೀಯರ ಮನದಲ್ಲಿ ಧೈರ್ಯ ತುಂಬಿರುವ ಅರಣ್ಯ ಇಲಾಖಾಧಿಕಾರಿಗಳು ಅಭಿನಂದನಾರ್ಹರು.
 ಇನ್ನೊಂದೆಡೆ, ಒಂದು ಅಮೋಘ ಧಾರ್ಮಿಕ ತೀರ್ಮಾನವು ತಲಕಾವೇರಿ ಕ್ಷೇತ್ರದಲ್ಲಿ ನಡೆಯಬೇಕಿದೆ. 2006 ರಲ್ಲಿ  ಪುನರ್ ಪ್ರತಿಷ್ಠಾಪನೆ, ಬ್ರಹ್ಮ ಕಲಶ ಮಾಡುವಾಗ ಜೀರ್ಣಗೊಂಡ ಅಗಸ್ತ್ಯ ಪ್ರತಿಷ್ಠಿತ ಶಿವಲಿಂಗವನ್ನು ಅಗಸ್ತ್ಯೇಶ್ವರ ಗುಡಿಯ ನೆಲಭಾಗದಲ್ಲಿ ಹುದುಗಿಸಿ ಮೇಲ್ಭಾಗದಲ್ಲಿ ನೂತನ  ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿತ್ತು. ಇದಾಗಿ 12 ವರ್ಷ ಕಳೆದ ಬಳಿಕ ನೂತನ ಆಡಳಿತ ಸಮಿತಿಯವರು ನೆಲದಲ್ಲಿ ಹುದುಗಿಸಿದ್ದ ಅಗಸ್ತ್ಯ ಪ್ರತಿಷ್ಠಿತ ಶಿವಲಿಂಗವನ್ನು 2018 ರಲ್ಲಿ ಹೊರ ತೆಗೆದು  ಹಾಕಿದರು. 2006 ರಲ್ಲಿ ಪ್ರತಿಷ್ಠಾಪಿಸಿದ್ದ ಶಿವಲಿಂಗವನ್ನು ಮತ್ತೆ ಪ್ರತಿಷ್ಠಾಪಿಸಿದರು. ಮುಖ್ಯವಾಗಿ ಅಗಸ್ತ್ಯ ಪ್ರತಿಷ್ಠಿತ ಜೀರ್ಣಗೊಂಡ ಶಿವಲಿಂಗವನ್ನು ತೆಗೆಯಬೇಕೆಂದು ಅಷ್ಟ ಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿತೆಂದು ಹಾಗೆ ಮಾಡಲಾಗಿತ್ತು. ಬಳಿಕ ಪೂಂಪುಹಾರ್‍ನಲ್ಲಿ ಕಾವೇರಿಯು ಸಮುದ್ರವನ್ನು ಸೇರುವೆಡೆ ಅಗಸ್ತ್ಯ ಪ್ರತಿಷ್ಠಿತ ಶಿವಲಿಂಗವನ್ನು ವಿಸರ್ಜಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ದೈವೇಚ್ಛೆಯೇ ಬೇರೆಯಾಗಿತ್ತು. ಈ ಸಂದರ್ಭ ಮೈಸೂರಿನ ಅಮೃತೇಶ್ ಮತ್ತು ಅವರ ಮಿತ್ರ ವಕೀಲರು ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಮತ್ತೆ ಅಗಸ್ತ್ಯ ಪ್ರತಿಷ್ಠಿತ ಶಿವಲಿಂಗವನ್ನು ಅದು ಜೀರ್ಣಗೊಂಡಿದ್ದರೂ ಅದನ್ನೇ ಮುಖ್ಯ ಲಿಂಗವಾಗಿ ಪ್ರತಿಷ್ಠಾಪನೆ ಮಾಡಬೇಕೆಂದು ಉಚ್ಚನ್ಯಾಯಾಲಯದಿಂದ ನಿರ್ದೇಶನ ತಂದರು. ಆದರೆ ಅಷ್ಟರಲ್ಲಾಗಲೇ ಹಳೆಯ ಶಿವಲಿಂಗವನ್ನು ಹೊರ ತೆಗೆದು, 2006 ರಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಲಿಂಗವನ್ನೇ ಪುನರ್ ಪತಿಷ್ಠಾಪನೆ ಮಾಡಿ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿತ್ತು. ಹೀಗಾಗಿ ತಡೆಯಾಜ್ಞೆ ಬಂದುದು ತಡವಾಗಿದ್ದು, ತೆಗೆದಿದ್ದ ಶಿವಲಿಂಗವನ್ನು ಸಮುದ್ರದಲ್ಲಿ ವಿಸರ್ಜಿಸಲೂ ಸಾಧ್ಯವಾಗದೆ ದೇವಾಲಯದ ಅವರಣದಲ್ಲಿ ಇರಿಸಲಾಯಿತು. ಇದೀಗ ಉಳಿದಿರುವ ಏಕೈಕ ಮಾರ್ಗವೆಂದರೆ,ಆ ಹಳೆಯ ಶಿವಲಿಂಗವನ್ನು ಸಮುದ್ರದಲ್ಲಿ ವಿಧ್ಯುಕ್ತವಾಗಿ ವಿಸರ್ಜಿಸುವದು ಅಥವ ಧಾರ್ಮಿಕ ತಜ್ಞರ, ವಿದ್ವಾಂಸರ, ಜ್ಯೋತಿಷಿಗಳ ಮಾರ್ಗದರ್ಶನ ಪಡೆದು ಮುಂದಿನ ಮಾರ್ಗ ಅನುಸರಿಸುವದು.
ಇದೀಗ ಹಳೆಯ ಶಿವಲಿಂಗ ದೇವಾಲಯ ಆವರಣದಲ್ಲಿ ಅನಾಥವಾಗಿ ಬಿದ್ದುಕೊಂಡಿದೆ. ಕಾವೇರಿ ಮಾತೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರೋ ಅಷ್ಟೇ ಪ್ರಾಮುಖ್ಯತೆಯನ್ನು ರಾಜ್ಯ ಸರಕಾರದ ಆಡಳಿತಕಾರರು ಅಗಸ್ತ್ಯೇಶ್ವರನಿಗೆ ನೀಡಬೇಕು ಎಂದು ಜ್ಯೋತಿಶ್ಶಾಸ್ತ್ರಜ್ಞರು 2002 ರಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಈ ಕುರಿತು ವಿಧಾನ ಪರಿಷತ್‍ನಲ್ಲಿಯೂ ವಿವರವಾಗಿ ಪ್ರಸ್ತಾಪಿಸಿದ್ದರು. ಆ ಬಳಿಕ ಇತ್ತೀಚೆಗೆ ಧಾರ್ಮಿಕ ದತ್ತಿ ಇಲಾಖಾ ಆಗಮ ಪಂಡಿತರು ಬಂದರು- ಹೋದರು. ಫಲಿತಾಂಶ ಮಾತ್ರ ಶೂನ್ಯ. ಮುಜರಾಯಿ ಸಚಿವರು ಬಂದು ಒಂದಷ್ಟು ಭರವಸೆ ನೀಡಿ ತೆರಳಿದವರು ಮತ್ತೆ ಬರಲಿಲ್ಲ. ಇಡೀ ರಾಜ್ಯದ, ದೇಶದ ಕಣ್ಮಣಿ ಕಾವೇರಿಯ ತವರೂರಲ್ಲಿ ಸಂದಿಗ್ಧವಾಗಿರುವ, ಇತ್ತ ವಿಸರ್ಜನೆಯೂ ಆಗದೆ ಅನಾಥ ಸಂಕೋಲೆಯಲ್ಲಿ ಬಂದಿಯಾದಂತಿರುವ ಪುರಾತನ ಶಿವಲಿಂಗದ ಬಗ್ಗೆ ರಾಜ್ಯ ಮುಜರಾಯಿ ಸಚಿವರು, ಆಗಮ ಪಂಡಿತರು ಏನೂ ನಿರ್ಧಾರ ಕೈಗೊಳ್ಳದೆ ತಾತ್ಸಾರ ಮಾಡುತ್ತಿರುವದು ಕೊಡಗಿನ ಮತ್ತು ಕರ್ನಾಟಕದ ಜನರ ದೌರ್ಭಾಗ್ಯ! ಒಂದೆಡೆ ಕೊಡಗೂ ಸೇರಿದಂತೆ ಕರ್ನಾಟಕದಲ್ಲಿ ಕೋವಿಡ್ ಸೋಂಕಿನ ದುಷ್ಪರಿಣಾಮವನ್ನು ನಿಯಂತ್ರಿಸಲು ಅಸಾಧ್ಯವಾಗುತ್ತಿರುವಂತಹ ದುಸ್ಥಿತಿ ಕಂಡುಬರುತ್ತಿದೆ. ಈ ಸಂದರ್ಭ ಎಷ್ಟು ಪ್ರಮಾಣದಲ್ಲಿ ವೈಜ್ಞಾನಿಕ, ವೈದ್ಯಕೀಯ ಪ್ರಯತ್ನಗಳು ಅವಶ್ಯಕವೋ ಅಷ್ಟೇ ಪ್ರಮಾಣದಲ್ಲಿ ಕರ್ನಾಟಕದ, ಭಾರತದ ಜೀವನದಿಯ ಉಗಮ ಸ್ಥಾನದಲ್ಲಿ ಅನಾಥವಾಗಿ ಎಸೆಯಲ್ಪಟ್ಟ ಶಿವಲಿಂಗವನ್ನು ವಿಸರ್ಜಿಸದಿದ್ದರೆ ರಾಜ್ಯಕ್ಕೆ ಇನ್ನೂ ಅನಾಹುತ ತಪ್ಪಿದ್ದಲ್ಲ. 2002 ರಲ್ಲಿ ವಾರಿಯರ್ ಎಂಬ ಖ್ಯಾತ ಜ್ಯೋತಿಷಿ ತಲಕಾವೇರಿಯ ಶಿವ ಲಿಂಗದ ಮಹಿಮೆ ಬಗ್ಗೆ ವಿಮರ್ಶಿಸುತ್ತಾ ಕಾವೇರಿಯಷ್ಟೇ ಪ್ರಭಾವಿತನಾಗಿರುವ ಇಲ್ಲಿನ ಶಿವ ಮುನಿದಿದ್ದಾನೆ. ಕ್ಷೇತ್ರದ ಪ್ರತಿಷ್ಠಾನಾಪನಾಚಾರ್ಯರಾಗಿರುವ ಅಗಸ್ತ್ಯ ಪ್ರತಿಷ್ಠಿತ ಶಿವ ಲಿಂಗ ಶಕ್ತಿಯ ಬಗ್ಗೆ  ರಾಜ್ಯದ ಆಡಳಿತ ನಡೆಸುವ ಸರಕಾರದ ನಿರ್ಲಕ್ಷ್ಯ ಸಲ್ಲದು. ಅನಾಹುತಗಳಾಗುತ್ತವೆ. ಶಿವಲಿಂಗವನ್ನು ವಿಧ್ಯುಕ್ತವಾಗಿ ಪುನರ್ ಪ್ರತಿಷ್ಠಾಪಿಸಿ ಕ್ರಮ ಬದ್ಧವಾದ ನಿತ್ಯ ಪೂಜೆಗಳನ್ನು ನಡೆಸಬೇಕು. ಆಗಷ್ಟೇ ಕಾವೇರಿ ಮಾತೆಯೂ ತೃಪ್ತಳಾಗುತ್ತಾಳೆ ಎಂದು ಖಚಿತ ನುಡಿಯಾಡಿದ್ದರು. ಆ ಬಳಿಕವಷ್ಟೇ ನಡೆದ ಜೀರ್ಣೋದ್ಧಾರ ಸಂದರ್ಭ ಅಗಸ್ತ್ಯೇಶ್ವರನ ಗುಡಿಯ ಪುನರ್ನಿರ್ಮಾಣ ಮಾಡಿ ಪುನರ್ ಪ್ರತಿಷ್ಠಾಪಿಸಲಾಗಿತ್ತು. ಆಗ ಹೊಸ ಲಿಂಗವನ್ನು ಪ್ರತಿಷ್ಠಾಪಿಸಲಾಗಿತ್ತು. ಜೀರ್ಣಗೊಂಡಿದ್ದ ಪುರಾತನ ಲಿಂಗವನ್ನು ಗರ್ಭಗುಡಿಯ ಕೆಳಗೆ ಹಾಗೇ ಇರಿಸಲಾಗಿತ್ತು.  12 ವರ್ಷಗಳ ಬಳಿಕ ಎರಡನೇ ಬಾರಿ ಬ್ರಹ್ಮ ಕಲಶ ಸಂದರ್ಭ ಈ ಪುರಾತನ ಲಿಂಗವನ್ನು ಹೊರ ತೆಗೆಯಲಾಯಿತು. ಆ ಬಳಿಕ ಈ ರೀತಿಯ ಅಯೋಮಯ ಸನ್ನಿವೇಶ ಉದ್ಭವವಾಗಿದೆ. ಈ ದಿಸೆಯಲ್ಲಿ ಅನಾಥವಾಗಿ ಬಿದ್ದಿರುವ ಶಿವಲಿಂಗವನ್ನು ತಕ್ಷಣವೇ ವಿಧ್ಯುಕ್ತವಾಗಿ ಸಮುದ್ರದಲ್ಲಿ ವಿಸರ್ಜಿಸಲು ಅಥವ ಜ್ಯೋತಿಷಿಗಳ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲು ಸಚಿವರು ಆದ್ಯ ಗಮನ ಹರಿಸಲಿ. ಇಡೀ ಸರಕಾರಿ ಯಂತ್ರವಿರುವಾಗ ಇಷ್ಟೊಂದು ಸಣ್ಣ ಕೆಲಸಕ್ಕೆ ಮುಜರಾಯಿ ಸಚಿವರು ಮೀನಾ-ಮೇಷ ಎಣಿಸುತ್ತ್ತಿರುವದನ್ನು ನೋಡಿದರೆ ಸರಕಾರ ನಿಜಕ್ಕೂ ಕಾವೇರಿ ಮಾತೆಯಿಂದ ಲಭಿಸುತ್ತಿರುವ ಕುಡಿಯುವ ನೀರು, ನೀರಾವರಿ, ವಿದ್ಯುತ್ ಮೊದಲಾದ ಅಪರಿಮಿತ ಸೌಲಭ್ಯವನ್ನು ಕಡೆಗಾಣಿಸಿ ಈ ಕ್ಷೇತ್ರವನ್ನು ಮರೆತಂತಿದೆ, ನಿಜಕ್ಕೂ ಇದು ಶೋಚನೀಯ.   ಆದರೆ,ಧಾರ್ಮಿಕ ಕ್ಷೇತ್ರಗಳಲ್ಲಿ ಧಾರ್ಮಿಕ ಕಾರ್ಯಗಳ ನಿರ್ಲಕ್ಷ್ಯ  ಇಡೀ  ನಾಡಿಗೆ ದುಷ್ಪರಿಣಾಮವುಂಟಾಗಬಲ್ಲುದು ಎಂಬ ಅರಿವು ಅವರಿಗಿರಬೇಕಿದೆ. ಏಕೆಂದರೆ ಈಗಾಗಲೇ ತಲಕಾವೇರಿ-ಭಾಗಮಂಡಲ ದೇವಾಲಯಗಳ ಹಳೆಯ ಆಡಳಿತ ಸಮಿತಿ ವಿಸರ್ಜನೆಯಾಗಿದ್ದರೂ ಇನ್ನೂ ಹೊಸ ಸಮಿತಿ ಕುರಿತು ನಿರ್ಧಾರವಾಗದಿರುವದೇ ಇದಕ್ಕೆ ಸಾಕ್ಷಿ. ಧಾರ್ಮಿಕ ದತ್ತಿ ಇಲಾಖೆ ತಕ್ಷಣ, ಅದರಲ್ಲೂ ಮಳೆಗಾಲಕ್ಕೆ ಮುನ್ನ ಕಾರ್ಯೋನ್ಮುಖವಾಗಿ ಹಳೆಯ ಶಿವಲಿಂಗವನ್ನು ಧಾರ್ಮಿಕ ಪ್ರಕ್ರಿಯೆಗಳ ಮೂಲಕ ವಿಸರ್ಜಿಸಲು ಹೆಜ್ಜ್ಜೆಯಿರಿಸಲಿ. ಕೊಡಗಿನ ಉಸ್ತುವಾರೀ ಸಚಿವರು, ಶಾಸಕರುಗಳೂ ಈ ಕುರಿತು ಮುತುವರ್ಜಿ ವಹಿಸಲಿ.
-ಜಿ.ರಾಜೇಂದ್ರ, ಪ್ರಧಾನ ಸಂಪಾದಕರು, ಶಕ್ತಿ ದಿನಪತ್ರಿಕೆ***

error: Content is protected !!