ಮಡಿಕೇರಿ ಮೇಕೇರಿ ಸಂಪರ್ಕ ರಸ್ತೆ ಅವ್ಯವಸ್ಥೆ

May 8, 2021

ಮಡಿಕೇರಿ ಮೇ 8 : ಇತ್ತೀಚೆಗಷ್ಟೇ ಕಾಂಕ್ರಿಟೀಕರಣಗೊಂಡಿರುವ ಮಡಿಕೇರಿಯಿಂದ-ಮೇಕೇರಿ ಸಂಪರ್ಕ ಕಲ್ಪಿಸುವ 4 ಕಿ.ಮೀ ದೂರದ ರಾಜ್ಯ ಹೆದ್ದಾರಿ ಸಂಚಾರಕ್ಕೆ ಯೋಗ್ಯವಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
2018 ರಲ್ಲಿ ಸಂಭವಿಸಿದ ಪಕೃತಿ ವಿಕೋಪದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಈ ತಿರುವು ರಸ್ತೆಯಲ್ಲಿ ಗುಡ್ಡ ಕುಸಿದು ಕೆಲವು ಭಾಗದಲ್ಲಿ ರಸ್ತೆಗೂ ಹಾನಿಯಾಗಿತ್ತು. ಈ ಹಿನ್ನೆಲೆ ಹಾನಿಗೀಡಾದ ರಸ್ತೆಯ ಆಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಂಕ್ರಿಟೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.
ಮೊದಲ ಹಂತವಾಗಿ 2020 ರ ಆಗಸ್ಟ್ 30 ರಿಂದ 2020 ರ ಅಕ್ಟೋಬರ್ 30 ರವರೆಗೆ ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿ 2 ತಿಂಗಳ ಕಾಲ ಕಾಮಗಾರಿ ನಡೆಸಲಾಗಿತ್ತು. ನಂತರ ಬಾಕಿ ಉಳಿದಿದ್ದ ಕಾಮಗಾರಿ ನಡೆಸುವ ಸಲುವಾಗಿ ಎರಡನೇ ಹಂತವಾಗಿ 2021ರ ಫೆ.25 ರಿಂದ ಮಾ.25ರ ವರಗೆ ಒಂದು ತಿಂಗಳ ಕಾಲ ಸಂಪೂರ್ಣ ರಸ್ತೆ ಬಂದ್ ಮಾಡಿ ಕಾಮಗಾರಿ ನಡೆಸಲಾಗಿತ್ತು. ಸಾರ್ವಜನಿಕರಿಗೆ ಬದಲಿ ರಸ್ತೆಯಾಗಿ ಮೇಕೇರಿ-ತಾಳತ್ ಮನೆ ಮೂಲಕ ಮಡಿಕೇರಿಗೆ ತೆರಳಲು ಅನುವು ಮಾಡಿಕೊಡಲಾಗಿತ್ತು.
ಎರಡು ಹಂತದಲ್ಲಿ ಸುಮಾರು 3 ತಿಂಗಳ ಕಾಲ ಪ್ರಮುಖ ರಸ್ತೆಯನ್ನು ಬಂದ್ ಮಾಡಿ ಕಾಂಕ್ರಿಟೀಕರಣಗೊಳಿಸಿದ ಲೋಕೋಪಯೋಗಿ ಇಲಾಖೆ, ಕಾಮಗಾರಿ ಆದ ಬಳಿಕ ಇತ್ತ ಕಡೆ ಗಮನ ಹರಿಸಿದಂತಿಲ್ಲ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ನೂತನವಾಗಿ ಕಾಂಕ್ರಿಟೀಕರಣಗೊಂಡ ರಸ್ತೆ ಕಚ್ಚಾ ಮಣ್ಣು ರಸ್ತೆಯಾಗಿ ಪರಿವರ್ತನೆಗೊಂಡಿದೆ. ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದ್ದು, ಮಳೆ ನೀರು ಸರಾಗವಾಗಿ ಹರಿಯದೇ ರಸ್ತೆ ತುಂಬಾ ಕೆಸರು ನಿಂತಿದೆ.
ಮಳೆ ನೀರಿನ ರಭಸಕ್ಕೆ ಕೆಲವು ಕಡೆಯಷ್ಟೇ ಇರುವ ಚರಂಡಿ ತುಂಬಾ ಮಣ್ಣು ನಿಂತು ರಸ್ತೆ ಮೇಲೆ ಮಣ್ಣಿನ ರಾಶಿ ನಿಂತಿದೆ. ಮಳೆಯಿಂದ ಹರಿದು ಬಂದ ಮರಳು ರಸ್ತೆಯ ತಿರುವಿನಲ್ಲಿ ವಾಹನವನ್ನು ಚಾಲಿಸುವಾಗ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ಒಂದೆರಡು ದಿನ ಬಿಸಿಲು ಬಂದರೆ ಸಾಕು ರಸ್ತೆಯ ಮೇಲಿನ ಮಣ್ಣು ಧೂಳಾಗಿ ಪರಿವರ್ತನೆಗೊಂಡು ವಾಹನ ಸವಾರರಿಗೆ ಅನಾನುಕೂಲ ಉಂಟಾಗಿ ಅಲರ್ಜಿ ಮುಂತಾದ ಆರೋಗ್ಯ ಸಮಸ್ಯೆ ಉಂಟಾಗಬಹುದು. ರಸ್ತೆ ಬದಿಗೆ ಮಾರ್ಕಿಂಗ್ ಮಾಡಿದ್ದು ರಸ್ತೆ ಮೇಲೆ ಮಣ್ಣು ನಿಂತ ಪರಿಣಾಮ ರಸ್ತೆ ಬದಿಯ ಮಾರ್ಕ್ ಮರೆಯಾಗಿ ರಸ್ತೆಯನ್ನು ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸುಮಾರು 3 ತಿಂಗಳ ಕಾಲ ಸಾರ್ವಜನಿಕ ರಸ್ತೆ ಬಂದ್ ಮಾಡಿ ನಡೆಸಿರುವ ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಚರಂಡಿ ನಿರ್ಮಿಸಿ, ಮಳೆ ನೀರು ಸರಾಗವಾಗಿ ಚರಂಡಿ ಮೂಲಕ ಹರಿಯುವಂತೆ ಮಾಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!