ಜಾತಿಯ ವಿಷಬೀಜ ಬಿತ್ತದೆ ಕೋವಿಡ್ ಸೋಂಕು ತೊಲಗಿಸೋಣ : ಕೊಡಗು ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಮನವಿ

May 8, 2021

ಮಡಿಕೇರಿ ಮೇ 8 : ಕೋವಿಡ್ ಸೋಂಕಿನಿಂದ ಸಾವು, ಬದುಕಿನ ನಡುವೆ ಹೋರಾಡುತ್ತಿರುವ ಜನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರತಿಯೊಬ್ಬರು ಜಾತಿ, ಧರ್ಮಗಳನ್ನು ಮರೆತು ಮಾನವೀಯ ನೆಲೆಗಟ್ಟಿನಲ್ಲಿ ಒಗ್ಗಟ್ಟಿನಿಂದ ಶ್ರಮಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಜನಪ್ರತಿನಿಧಿಗಳು ಜಾತಿಯ ವಿಷಬೀಜ ಬಿತ್ತುತ್ತಿರುವುದು ಖಂಡನೀಯವೆಂದು ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಂಗಳೂರು ಬಿಬಿಎಂಪಿ ವಾರ್ ರೂಂ ನ ಸಿಬ್ಬಂದಿಗಳ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್ ರೆಡ್ಡಿ ಅವರ ವಿರುದ್ಧ ಜಾತ್ಯತೀತ ಜನತಾದಳದ ವೀಕ್ಷಕರಾದ ನಜ್ಮಾ ನಜೀ಼ರ್ ಅವರು ದೂರು ನೀಡಿರುವುದು ಸ್ವಾಗತಾರ್ಹವೆಂದು ತಿಳಿಸಿದ್ದಾರೆ.
ಸಮಾಜದಲ್ಲಿ ಅಶಾಂತಿ ಮೂಡಿಸುವವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟಿರುವ ಅವರು, ನೊಂದವರಿಗೆ ನ್ಯಾಯ ಒದಗಿಸಲಾಗದ ಜನಪ್ರತಿನಿಧಿಗಳು ಪರಿಸ್ಥಿತಿಯನ್ನು ಜಾತಿ ಹೆಸರಿನಲ್ಲಿ ಹದಗೆಡಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಡಿಸಿದ್ದಾರೆ.
ಸಂಸದರಾದವರಿಗೆ ತಮ್ಮದೇ ಆದ ಜವಬ್ದಾರಿಗಳಿರುತ್ತವೆ, ಆದರೆ ಕೋವಿಡ್ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಮರೆ ಮಾಚುವುದಕ್ಕಾಗಿ ಬಿಬಿಎಂಪಿ ವಾರ್ ರೂಂ ವಿರುದ್ಧ ತೇಜಸ್ವಿ ಸೂರ್ಯ ಅವರು ಹರಿಹಾಯ್ದಿದ್ದಾರೆ ಎಂದು ಇಸಾಕ್ ಖಾನ್ ಟೀಕಿಸಿದ್ದಾರೆ.
ಸಂವಿಧಾನದ ಆಧಾರದಲ್ಲಿ ರಚನೆಯಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತ ದೇಶ ಸರ್ವಧರ್ಮಗಳ ಶಾಂತಿಯ ಮತ್ತು ಸೌಹಾರ್ದತೆಯ ತೋಟವೆಂದು ಸಾಬೀತಾಗಿದೆ. ಆದರೆ ಇಂದಿನ ರಾಜಕಾರಣಿಗಳು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾತಿಯ ಹೆಸರಿನಲ್ಲಿ ಹದಗೆಡಿಸಿ ಸಮಾಜವನ್ನು ಒಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿಯೊಬ್ಬ ಶಾಸಕ, ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ಕ್ಷೇತ್ರದ ಜನರ ಕಣ್ಣೀರಿಗೆ ಸ್ಪಂದಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಪರಿಸ್ಥಿತಿಯ ದುರ್ಲಾಭವನ್ನು ಪಡೆದು ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನರು ಜಾಗೃತರಾಗಬೇಕೆಂದು ಇಸಾಕ್ ಖಾನ್ ಮನವಿ ಮಾಡಿದ್ದಾರೆ.
ಕೋವಿಡ್ ಸೋಂಕು ವ್ಯಾಪಿಸುವುದನ್ನು ತಡೆಯಲು ಪ್ರತಿಯೊಬ್ಬ ಪ್ರಜೆಯೂ ಜಿಲ್ಲಾಡಳಿತ ಸೂಚಿಸಿರುವ ಕೋವಿಡ್ ನಿಯಮಗಳನ್ನು ಪಾಲಿಸಬೇಕು, ವಿನಾಕಾರಣ ಮನೆಯಿಂದ ಹೊರ ಬರಬಾರದು, ಅಗತ್ಯ ವಸ್ತುಗಳ ಖರೀದಿ ಸಂದರ್ಭ ನೂಕುನುಗ್ಗಲು ಉಂಟಾಗದಂತೆ ನೋಡಿಕೊಳ್ಳಬೇಕು, ಪೊಲೀಸರು ಹಾಗೂ ವರ್ತಕರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಅವರು ಕೋರಿದ್ದಾರೆ.

error: Content is protected !!