ಇಂದು ನಾವು ಬದುಕಿನ ವಾಸ್ತವತೆಯನ್ನು ಅರಿಯುವ ಕಾಲ ಸನ್ನಿಹಿತವಾಗಿದೆ

May 12, 2021

ಇತ್ತೀಚೆಗೆ ಜನರ ಜೀವನವನ್ನು ಕರೋನ ಎಂಬ ವೈರಸ್ ತಲ್ಲಣಗೊಳಿಸಿಸಿತು. ಅಂದರೆ ಒಂದು ಕೋನದಿಂದ ಸರಿ. ಅದನ್ನೇ ಇನ್ನೊಂದು ಕೋನದಿಂದ ವ್ಯಾಖ್ಯಾನಿಸಿದಾಗ ಈ ಸನ್ನಿವೇಶವು ಮನುಷ್ಯನ ಬದುಕಿನ ವಾಸ್ತವವನ್ನು ಅರಿಯುವಂತೆ ಮಾಡಿತು. ಮಾನವನಿಗೆ ತನ್ನ ಜೀವನದ ಮೌಲ್ಯವನ್ನು ಅರಿಯಲು ಒಂದು ವೇದಿಕೆ ನಿರ್ಮಾಣವಾಯಿತು. ಒಂದು ಸಾಧಾರಣ ವೈರಸ್ ನಮಗರಿವಿಲ್ಲದಂತೆ ನಮ್ಮನ್ನು ಸಾವಿನೆಡೆಗೆ ನೂಕುತ್ತದೆ ಎಂದರೆ ಇಷ್ಟೆಲ್ಲಾ ವಿಜ್ಞಾನದ ಆವಿಷ್ಕಾರ ನಡೆದರೂ ಜೀವದ ಭಯದಿಂದ ಗೂಡು ಸೇರಿಕೊಂಡದ್ದು ವಿಪರ್ಯಾಸವೇ ಸರಿ. ಭೂಮಂಡಲದ ಇತರೆ ಎಲ್ಲಾ ಪ್ರಾಣಿ ಪಕ್ಷಿಗಳ ನಾಶಕ್ಕೆ ಕಾರಣವಾದ ನಮಗೆ ನಮ್ಮ ಜೀವದ ಬೆಲೆ ಅರಿವಾದದ್ದು ಈಗಲೆ. ಅದೇಕೋ ಕಾಣೆ ಇಷ್ಟು ದಿನ ದೇವರ ಮೇಲೆ ಭಾರ ಹಾಕಿ ನೆಮ್ಮದಿ ಕಾಣುತ್ತಿದ್ದ ನಾವು ಈ ಸಾರಿ ದೇವರಿಂದ ದೂರ ಉಳಿದೆವು.
ಮನುಷ್ಯ ಪ್ರಕೃತಿಯೊಡನೆ ಬದುಕಲು ಕಲಿತಿದ್ದರೆ ನಮಗಿಂತ ದುಸ್ಥಿತಿ ಬರುತ್ತಿರಲಿಲ್ಲ. ನಾವು ಪ್ರಕೃತಿಯನ್ನು ನಾಶ ಮಾಡಿದೆವು. ನಾವೆಷ್ಟು ತಂತ್ರಜ್ಞಾನದ ಮೊರೆ ಹೋದರೂ ಪ್ರಕೃತಿಯೇ ನಮ್ಮನ್ನಾಳುವುದು ಎನ್ನುವುದಕ್ಕೆ ಪ್ರಸ್ತುತ ಸನ್ನಿವೇಶವೇ ಉದಾಹರಣೆ. ಇಂದು ಭೂಮಂಡಲದ ಇತರೆ ಜೀವ ಸಂಕುಲಗಳಿಗೆ ಇರುವ ನೆಮ್ಮದಿಯ ಬದುಕು ನಾಗರಿಕತೆಯ ಬೆನ್ನಟ್ಟಿದ ನಮಗೆ ಇಲ್ಲ. ಪ್ರಸ್ತುತ ಪರಿಸ್ಥಿತಿ ಮಾನವನಿಗೆ ಒಂದು ಎಚ್ಚರಿಕೆಯ ಗಂಟೆ. ಇದರಿಂದ ತನ್ನ ತಪ್ಪನ್ನು ತಿದ್ದಿಕೊಂಡು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ನಮ್ಮ ಮುಂದಿನ ಪೀಳಿಗೆಯ ಬದುಕು ದುರ್ಗಮ ಹಾದಿಯಲ್ಲಿ ಸಾಗುತ್ತದೆ.
ಇಂದು ನಾವು ಲಾಕ್‌ಡೌನ್ ಆದ ಕೂಡಲೇ ಮನೆಯೊಳಗೆ ಬಂದಿಯಾದೆವು. ಇಂತಹ ಒಂದು ಘಟನೆ ನಮ್ಮ ಜೀವಿತದ ಅವಧಿಯಲ್ಲಿ ಎದುರಿಸುತ್ತೇವೆಂದು ನಾವು ಊಹಿಸಿರಲಿಲ್ಲ. ನಾವು ನಾಟಕೀಯ ಬದುಕನ್ನು ಬದುಕುತ್ತಿದ್ದೆವು. ಮಾನವೀಯ ಮೌಲ್ಯಗಳಿಗೆ, ಸಂಬAಧಗಳಿಗೆ ಬೆಲೆ ಕೊಡುತ್ತಿರರಲಿಲ್ಲ. ಪ್ರತಿಯೊಂದನ್ನು ವ್ಯವಹಾರಿಕ ದೃಷ್ಟಿಯಿಂದ ನೋಡುತ್ತಿದ್ದೆವು. ನಮಗೆ ಯಾವುದಕ್ಕೂ ಸಮಯವಿರುತ್ತಿರಲಿಲ್ಲ. ಏಕೆಂದರೆ ಅಂತಹ ಬದುಕನ್ನು ನಾವು ರೂಢಿಸಿಕೊಂಡಿದ್ದೇವೆ. ನಾವು ನಮ್ಮವರಿಗಾಗಿ ಬದುಕಲು ಕಲಿಯಲಿಲ್ಲ. ನಮ್ಮ ಜೀವನದಲ್ಲಿ ಅಗತ್ಯತೆಗಳಿಗಿಂತ ಅನಗತ್ಯಗಳೇ ಹೆಚ್ಚಾದವು. ಆದ್ದರಿಂದ ನಮ್ಮ ಜೀವನದ ಹೆಚ್ಚಿನ ಸಮಯವನ್ನು ಅದನ್ನು ಪೂರೈಸಲು ನಾವು ಕಳೆದುಕೊಳ್ಳುತ್ತಿದ್ದೆವು.
ಇಂದು ನಮಗೇನು ಬೇಕೆಂಬ ಚಿಂತನೆ ನಡೆಸುವ ಅವಶ್ಯಕತೆ ಇದೆ. ಮನುಷ್ಯ ಬದುಕಲು ಯಾವುದು ಮುಖ್ಯ ಎಂಬುದನ್ನು ಚಿಂತಿಸುವ ಕಾಲ ಬಂದಿದೆ. ನಮಗೆ ಬೇಕಾಗಿರುವುದು ತಾಲ್ಲೂಕಿಗೊಂದು ಸುಸಜ್ಜಿತವಾದ ಆಸ್ಪತ್ರೆ. ನಾವು ಗಲ್ಲಿಗೊಂದರAತೆ ದೇವಸ್ಥಾನ ನಿರ್ಮಾಣ ಮಾಡುವಲ್ಲಿ ತೋರುವ ಉತ್ಸಾಹ ತಾಲ್ಲೂಕಿಗೊಂದು ಆಸ್ಪತ್ರೆ ನಿರ್ಮಾಣ ಮಾಡುವಲ್ಲಿ ತೋರುವುದಿಲ್ಲ. ಇಂದು ಕೋವಿಡ್-19 ಖಾಯಿಲೆಯು ಬಂದಾಗ ಸರ್ಕಾರಿ ಆಸ್ಪತ್ರೆಗಳು ದೇವಾಲಯಗಳಾಗಿ ಪರಿವರ್ತನೆಯಾಯಿತು. ಇಷ್ಟು ದಿನ ಲಕ್ಷಗಟ್ಟಲೆ ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳು ಬಹುತೇಕ ಕೊರೋನಾದಿಂದ ದೂರ ಉಳಿದವು. ಇಂದು ತಾಲ್ಲೂಕಿಗೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಸಂಪನ್ಮೂಲದ ಕ್ರೂಢೀಕರಣಕ್ಕೆ ನಾವು ಪ್ರಯತ್ನಿಸಬೇಕು. ಇಂದು ದೇವಾಲಯಗಳ ಪುನರ್ ನಿರ್ಮಾಣಗಳು, ಪುನರ್ ಪ್ರತಿಷ್ಠಾಪನೆಗಳು ಹಾಗೂ ದೇವಾಲಯಗಳಲ್ಲಿ ನಡೆಯುವ ಪೂಜೆ ಪುನಸ್ಕಾರಗಳು ವ್ಯಾಪಾರೀಕರಣಗೊಂಡಿದೆ. ಇಂದು ದೇವಸ್ಥಾನಗಳು ಆಧುನಿಕ ಸ್ಪರ್ಶ ಕಂಡಿದೆ ಹೊರತು ನಿಜವಾದ ಭಕ್ತಿಯನ್ನು ಕಾಣುವುದಿಲ್ಲ. ಇಂದು ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಕಾರ್ಯಗಳು ವ್ಯವಹಾರಿಕ ಮನೋಭಾವದಿಂದ ಕೂಡಿದೆ. ಹಿಂದೆ ಒಂದೆರಡು ದಿನಗಳಲ್ಲಿ ಮುಗಿಯುತ್ತಿದ್ದ ಪೂಜೆ ಪುನಸ್ಕಾರಗಳು ಕಾರ್ಯ ಇಂದು ವಾರದಿಂದ ಹದಿನೈದು ದಿನಕ್ಕೆ ಬಂದು ತಲುಪಿದೆ. ಅದಕ್ಕೆ ಮಾಡುವ ವೆಚ್ಚಗಳು, ಜನರ ಸಮಯ ಎಲ್ಲಾ ಲೆಕ್ಕಕ್ಕಿಲ್ಲ. ಅದೇ ರೀತಿ ಗಣೇಶೋತ್ಸವಗಳು, ದಸರಾ ಉತ್ಸವಗಳು, ಜಾತ್ರೆಗಳು ಹಾಗೂ ಮತ್ತಿತರೆ ಉತ್ಸವಗಳಿಗೆ ಅನಾವಶ್ಯಕವಾದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿದರೆ ನಮಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಒದಗಿಸುವುದು ಕನಸಿನ ಮಾತಲ್ಲ. ಸರ್ಕಾರ ಕೂಡ ಇನ್ನು ಇಂತಹ ಕಾರ್ಯಗಳಿಗೆ ಹಣ ನೀಡುವುದನ್ನು ನಿಲ್ಲಿಸಬೇಕು. ಹಿಂದೆ ಸರ್ಕಾರದ ಅನುದಾನವಿಲ್ಲದೆ ಜನರೇ ದೇವತಾ ಕಾರ್ಯಗಳನ್ನು ನಡೆಸುತ್ತಿದ್ದರು. ಈ ರೀತಿ ಮಾಡಿದಾಗ ಜನರು ಅದರಲ್ಲಿ ಭಾಗಿಯಾಗುತ್ತಾರೆ. ಅಚ್ಚುಕಟ್ಟಾಗಿ ನಡೆಸುತ್ತಾರೆ. ಜನರೇ ಖರ್ಚನ್ನು ಭರಿಸಿದರೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಬೀಳುತ್ತದೆ. ಇಂದು ಪ್ರತಿಯೊಂದಕ್ಕೂ ಸರ್ಕಾರದ ಮುಂದೆ ಕೈಯೊಡ್ಡುವುದು ಅಭ್ಯಾಸವಾಗಿದೆ.
ಅದೇ ರೀತಿ ನಾವು ಕೃಷಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಇಂದು ಯುವ ಶಕ್ತಿಯು ಹೆಚ್ಚಾಗಿ ಪಟ್ಟಣಕ್ಕೆ ವಲಸೆ ಹೋಗುವುದನ್ನು ತಡೆಗಟ್ಟಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಸ್ವಯಂ ಉದ್ಯೋಗ ಸೃಷ್ಟಿಸುವ ಕೃಷಿಗೆ ಆದ್ಯತೆ ನೀಡಬೇಕು. ಹಿಂದಿನ ಕಾಲದಲ್ಲಿ ಜನರು ಮುಂದಾಲೋಚನೆ ವಹಿಸುತ್ತಿದ್ದರು. ಮಳೆಗಾಲ ಬರುವುದಕ್ಕೆ ಮುಂಚೆ ಆಹಾರ ಧಾನ್ಯವನ್ನು ಶೇಖರಿಸಿ ಇಟ್ಟಿರುತ್ತಿದ್ದರು. ಅದೇ ರೀತಿ ಜೀವನೋಪಯೋಗಿ ವಸ್ತುಗಳನ್ನು ಶೇಖರಿಸಿ ಇಟ್ಟಿರುತ್ತಿದ್ದರು. ಪ್ರತಿ ಮನೆಯಲ್ಲೂ ಭತ್ತದ ಸಂಗ್ರಹಣೆ ಅದರೊಡನೆ ಪ್ರತೀ ಊರಿನಲ್ಲಿ ಧವಸ ಭಂಡಾರದ ಸ್ಥಾಪನೆ ಮಾಡಿದ್ದರು. ಎಂತಹ ಮುಂದಾಲೋಚನೆ ಅಂದರೆ ಅಂತಹ ವ್ಯವಸ್ಥೆಗಳು ಪುನರಾರಂಭವಾಗಬೇಕು. ಸರ್ಕಾರವು ಸ್ಥಳೀಯವಾಗಿ ಆಹಾರ ಸಂಗ್ರಹಣೆಗೆ ಒತ್ತು ನೀಡಬೇಕು. ನೀವೇ ಯೋಚಿಸಿ, ಕೊರೋನ ಇದೇ ಪರಿಸ್ಥಿತಿಯಲ್ಲಿ ಮುಂದುವರೆದರೆ ಆಹಾರದ ಕೊರತೆಯ ತೀವ್ರತೆಯು ಎಷ್ಟು ಎಂದು. ಕರೋನದಿಂದ ಪೆಟ್ಟು ತಿನ್ನದ ಕ್ಷೇತ್ರವೆಂದರೆ ಕೃಷಿ ಮಾತ್ರ. ಅದರ ಅಗತ್ಯತೆ ಎಲ್ಲಾ ಕಾಲದಲ್ಲಿಯೂ ಇರುತ್ತದೆ ಎಂಬುದನ್ನು ಮನಗಾಣಬೇಕು.
ಮಾನವರು ಇಂದು ತನ್ನ ಸ್ವಾರ್ಥಕ್ಕೋಸ್ಕರ ಕೋಟಿಗಟ್ಟಲೆ ಹಣ, ಆಸ್ತಿ ಎಲ್ಲವನ್ನು ಶೇಖರಿಸಿ ಇಟ್ಟಿರುತ್ತಾರೆ. ಐಶಾರಾಮಿ ಮನೆ ನಿರ್ಮಾಣ ಮಾಡುತ್ತಾರೆ. ಒಂದೊAದು ಮನೆಯಲ್ಲಿ ಅವಶ್ಯಕತೆಗಿಂತಲೂ ಹೆಚ್ಚಾಗಿ ವಾಹನಗಳನ್ನು ಹೊಂದಿರುತ್ತಾರೆ. ಮನೆಯಲ್ಲಿ ಎಲೆಕ್ಟಾçನಿಕ್ ವಸ್ತುಗಳಿಗೆ ವ್ಯಯ ಮಾಡುತ್ತಾರೆ. ಆದರೆ ಇಂದು ಸಾರ್ವಜನಿಕವಾಗಿ ಸಾಮಾಜಿಕ ಸೇವೆಯಲ್ಲಿ ಮಾಡುವುದಿಲ್ಲ. ಸಮಾಜ ನಿರ್ಮಾಣದಲ್ಲಿ ತೊಡಗುತ್ತಿದ್ದರು. ಹಿಂದೆ ಊರಿನ ಹಿರಿಯರು, ಗಣ್ಯರು ತನ್ನ ಊರಿನ ಆಗು- ಹೋಗುಗಳ ಚಿಂತೆ, ಜನಪರ ಕಾಳಜಿಯನ್ನು ಹೊಂದಿರುತ್ತಿದ್ದರು. ಅದರ ಫಲವಾಗಿ ಊರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಶಾಲೆಗಳು ಕೆರೆಗಳು, ಬಾವಿಗಳು, ಸಮುದಾಯ ಭವನಗಳು ನಿರ್ಮಾಣವಾಗುತ್ತಿದ್ದವು. ಕೊಡಗಿನಲ್ಲಿ ಬಹುತೇಕ ಶಾಲೆಗಳು, ಆರೋಗ್ಯ ಕೇಂದ್ರಗಳು ದಾನಿಗಳ ನೆರವಿನಿಂದ ನಿರ್ಮಾಣವಾದವು. ಇದಕ್ಕೆ ಜಾಗಗಳನ್ನು, ಧನ ಸಹಾಯವನ್ನು ಊರಿನವರೆ ಭರಿಸುತ್ತಿದ್ದರು. ಅಷ್ಟು ಮುಂದಾಲೋಚನೆ ಇತ್ತು. ಅಂದಿನ ಕಾಲದಲ್ಲಿ ಇರುವವರು ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇಂದು ಕಿತ್ತು ತಿನ್ನುವವರೇ. ಅದೇ ವಿಪರ್ಯಾಸ.
ಇಂದು ದಾನ ಮಾಡುವವರು ಹೆಸರಿಗಾಗಿ ದಾನ ಮಾಡುತ್ತಾರೆ. ಅವರನ್ನು ವೇದಿಕೆಗೆ ಕರೆಯಬೇಕು. ಸಮಾಜದಲ್ಲಿ ಗುರುತಿಸಬೇಕು ಎಂಬುದೇ ಅವರ ಅಭಿಲಾಷೆ. ಯಾರಿಗೂ ಸಮಾಜ ನಿರ್ಮಾಣದ ಅವಶ್ಯಕತೆ ಇಲ್ಲ. ಇಂದು ಕರೋನ ಎಂಬ ಮಹಾ ಮಾರಿಯು ಬಂದಾಗ ಎಲ್ಲರೂ ಅವಲಂಬಿಸಿದ್ದೇ ಸರ್ಕಾರಿ ಆಸ್ಪತ್ರೆಯನ್ನು ಎಂಬುದನ್ನು ಮನಗಾಣಬೇಕು. ಸರ್ಕಾರಿ ಆಸ್ಪತ್ರೆಗಳು, ಅಲ್ಲಿನ ವೈದ್ಯರು, ದಾದಿಗಳು ಇತರೆ ಸಿಬ್ಬಂದಿಗಳು ದೇವರಾದರು. ಅವರು ಆಪತ್ಕಾಲದಲ್ಲಿ ಟೊಂಕಕಟ್ಟಿ ನಿಂತರು.
ನಾವೇ ಯೋಚಿಸುವ ಇಂದು ನಮ್ಮಲ್ಲಿ ಸಂಪನ್ಮೂಲದ ಕೊರತೆಯೇ ಇಲ್ಲ. ಪ್ರಾಮಾಣಿಕ ಪ್ರಯತ್ನದ ಕೊರತೆ ಎದ್ದು ಕಾಣುತ್ತದೆ. ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಇಂದು ನಾವು ನಮ್ಮ ಜೀವನದ ಅವಶ್ಯಕತೆಗಿಂತ ಹೆಚ್ಚಾಗಿ ವ್ಯಯ ಮಾಡುತ್ತೇವೆ. ಇಂದು ನಾವು ಗಮನಿಸಬೇಕಾದ ಇನ್ನು ಕೆಲವೊಂದು ಅಂಶಗಳೆAದರೆ ನಾವು ಮನೋರಂಜನೆಗೆ ವ್ಯಯಿಸುವಷ್ಟು ಹಣವನ್ನು ನಮ್ಮ ಆರೋಗ್ಯದ ರಕ್ಷಣೆಗೆ ವ್ಯಯ ಮಾಡುವುದಿಲ್ಲ. ಇಂದು ಮನೋರಂಜನೆಗಾಗಿ ಹೈಟೆಕ್ ಚಿತ್ರ ಮಂದಿರಗಳು, ಮಾಲ್‌ಗಳು, ಕ್ರೀಡಾಂಗಣಗಳು, ಕ್ಲಬ್‌ಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ. ವೈಯಕ್ತಿಕವಾಗಿ ನಾವು ಸಮಾರಂಭಗಳಿಗೆ ದುಂದುವೆಚ್ಚವನ್ನು ಮಾಡುತ್ತೇವೆ. ಇವುಗಳಿಗೆ ಕಡಿವಾಣ ಹಾಕಿ ಅಂತಹ ಹಣವನ್ನು ಕ್ರೂಢೀಕರಿಸಿ, ಶಿಕ್ಷಣ ಕ್ಷೇತ್ರಕ್ಕೆ, ಆರೋಗ್ಯ ಕ್ಷೇತ್ರಕ್ಕೆ ಬಂಡವಾಳ ಹೂಡಿದರೆ ಮುಂದಿನ ದಿನಗಳಲ್ಲಿ ನಾವು ವೈದ್ಯಕೀಯ ಸೇವೆಗೆ ಭಯಭೀತರಾಗುವುದು ತಪ್ಪುತ್ತದೆ. ನಮ್ಮ ಸಂಪಾದನೆಯ ಬಹುಭಾಗವನ್ನು ವೆಚ್ಚ ಮಾಡುವುದೇ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ವೈದ್ಯಕೀಯ ವೆಚ್ಚಕ್ಕೆ. ನಮಗೆ ಕೊರೋನ ಬಂದಾಗಲೇ ವೈದ್ಯಕೀಯ ಕ್ಷೇತ್ರದ ಅವಶ್ಯಕತೆ ಅರಿವಾದದು. ಕೊರೋನ ತೀವ್ರವಾದ ಖಾಯಿಲೆ ಅಲ್ಲ. ಆದರೆ ಅದಕ್ಕೆ ಪೂರಕವಾದ ವ್ಯವಸ್ಥೆಗಳು ಇಲ್ಲದೇ ಇರುವುದರಿಂದ ನಾವು ಭಯಭೀತರಾಗಿದ್ದೇವೆ.
ಮುಂದಿನ ದಿನಗಳಲ್ಲಿ ಸರ್ಕಾರ ಕೂಡ ವೈದ್ಯಕೀಯ, ಆಹಾರ ಶೇಖರಣೆಗೆ, ಶಿಕ್ಷಣ ಕೇತ್ರಕ್ಕೆ ಒತ್ತು ನೀಡಬೇಕು. ಆದ್ಯವಾಗಿ ನಾವು ಅಭಿವೃದ್ಧಿ ಪಡಿಸಬೇಕಾದ ಕ್ಷೇತ್ರ ಎಂದರೆ ಕೃಷಿ. ಕೈಗಾರಿಕಾ ಕ್ಷೇತ್ರಕ್ಕೆ ಒತ್ತು ನೀಡುವಂತೆ ಕೃಷಿಗೂ ಒತ್ತು ನೀಡಬೇಕು. ಕರೋನಾದಂತಹ ಜೈವಿಕ ಯುದ್ಧವನ್ನು ಎದುರಿಸಬೇಕೆಂದರೆ ಆಹಾರ ಕ್ರಾಂತಿ ಉಂಟಾಗಬೇಕು. ಇದಕ್ಕಾಗಿ ಮುನ್ನೆಚ್ಚರಿಕೆ, ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕು. ಇಂದು ಕರೋನಾ ವಿಶ್ವವ್ಯಾಪಿ ವ್ಯಾಪಿಸಿದೆ. ಅದು ತೀವ್ರವಾಗಿ ಆವರಿಸಿದರೆ ಖಂಡಿತವಾಗಿಯೂ ಆಹಾರ ಕ್ಷಾಮವನ್ನು ಎದುರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇದರ ತೀವ್ರತೆಯು ಹೆಚ್ಚಾಗಿರುತ್ತದೆ. ಆದ್ದರಿಂದ ಸರ್ಕಾರವು ಸ್ಥಳೀಯವಾಗಿ ಕೃಷಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು.
ಏನೇ ಆಗಲಿ ನಮಗೆ ಕರೋನಾ ಒಂದು ಬದುಕಿನ ಪಾಠ ಕಲಿಸಿದೆ. ಆದರೆ ಅದರಿಂದ ನಾವು ಪಾಠ ಕಲಿಯುತ್ತೇವೆಯೋ ಇಲ್ಲವೋ ಅಥವಾ ನಮ್ಮ ಹಳೇ ಬುದ್ಧಿಯನ್ನು ಮುಂದುವರೆಸುತ್ತೇವೆಯೋ ಎನ್ನುವುದು ಮುಖ್ಯ. ಏಕೆಂದರೆ ಮನುಷ್ಯನ ಬದುಕಿನಲ್ಲಿ ಅನೇಕ ಘಟನೆಗಳು ಬಂದರೂ ಅವನು ಬದಲಾಗಲಿಲ್ಲ. ಆ ಸಮಯದಲ್ಲಿ ಮಾತ್ರ ಇದರ ಬಗ್ಗೆ ಚಿಂತನೆ ನಡೆಸುತ್ತಾನೆ. ನಂತರ ಆ ಘಟನೆಗಳನ್ನು ಮರೆತು ತನ್ನ ಹಳೇಯ ಚಾಳಿಯನ್ನೇ ಮುಂದುವರೆಸುತ್ತಾನೆ.

ಕೊನೇಯ ಮಾತೆಂದರೆ ವಾಟ್ಸಾಪ್‌ನ ಒಂದು ಸಂದೇಶ ಸಮಯೋಚಿತವಾಗಿತ್ತು. ‘ಲಕ್ಷ ಕೋಟಿ ವೆಚ್ಚದ ಮನೆಗಳು, ಶೆಡ್ಡಿನಲ್ಲಿ ಐಶಾರಾಮಿ ಕಾರುಗಳು, ಆಡಂಬರದ ಮದುವೆಗಳು, ಅಲ್ಲಿ ಕಸದ ತೊಟ್ಟಿಗೆ ಸೇರುವ ಆಹಾರಗಳು, ಲಂಗು ಲಗಾಮಿಲ್ಲದ ಭೋಜನ ಕೂಟಗಳು, ಮಿತಿಮೀರಿದ ಸುತ್ತಾಟ, ಮಾಲ್-ಅಂಗಡಿಗಳಲ್ಲಿ ಅನಗತ್ಯ ಖರೀದಿ, ಪರಸ್ಪರ ಅಸೂಯೆ ದ್ವೇಷ, ಧರ್ಮ ಜಾತಿ ಮಧ್ಯೆ ಕಂದಕ, ದೇವರನ್ನೇ ಮರೆತ ಜೀವನ ಕ್ರಮ. ಈ ರೋಗ ಒಂದು ನೆಪ ಅಷ್ಟೆ. ಸೃಷ್ಟಿಕರ್ತನು ಬಿಟ್ಟ ಹಗ್ಗವನ್ನೊಮ್ಮೆ ಹಿಡಿದಿದ್ದಾನೆ ಅಷ್ಟೆ. ನಮ್ಮ ಅಹಂಭಾವ ನುಚ್ಚು ನೂರಾಗಿದೆ. ಇದು ವಾಸ್ತವದ ಕೈಗನ್ನಡಿ’.

ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ, ಮಡಿಕೇರಿ.
(9448899554, 9448809553).

error: Content is protected !!