ರಂಜಾನ್ ಸರಳ ಆಚರಣೆ : ಕೋವಿಡ್ ನಿವಾರಣೆಗೆ ಪ್ರಾರ್ಥಿಸಲು ಖಲೀಲ್ ಭಾಷಾ ಮನವಿ

May 12, 2021

ಮಡಿಕೇರಿ ಮೇ 12 : ಕೋವಿಡ್ ಸೋಂಕು ದೇಶವ್ಯಾಪಿ ಸಂದಿಗ್ಧ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಮುಸಲ್ಮಾನರ ಈದ್ ಉಲ್ ಫಿತ್ರ್ ರಂಜಾನ್ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವ ಅನಿವಾರ್ಯತೆ ಎದುರಾಗಿದೆ. ದೇಶದಿಂದ ಕೋವಿಡ್ ನಿವಾರಣೆಯಾಗಿ ಜನ ನೆಮ್ಮದಿಯಿಂದ ಬದುಕುವಂತೆ ಮಾಡಲು ಈ ಪವಿತ್ರ ಕಾಲದಲ್ಲಿ ಸರ್ವರೂ ದೇವರನ್ನು ಪ್ರಾರ್ಥಿಸಬೇಕೆಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಭಾಷಾ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಿರಂತರ ಕೋವಿಡ್ ಸಾವು, ನೋವಿನಿಂದ ದೇಶ ದು:ಖದಲ್ಲಿ ಮುಳುಗಿದೆ, ಕಳೆದ ವರ್ಷದಂತೆ ಈ ಬಾರಿಯೂ ಈದ್ ಉಲ್ ಫಿತ್ರ್ ನ್ನು ಸರಳ ರೀತಿಯಲ್ಲಿ ಮನೆಯಲ್ಲೇ ಆಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಯಾರೂ ಬೇಸರ ಪಟ್ಟುಕೊಳ್ಳದೆ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸೋಣ ಎಂದು ಹೇಳಿದ್ದಾರೆ.
ಮೂವತ್ತು ದಿನಗಳ ಪರಿಶುದ್ಧ ಉಪವಾಸ ವ್ರತ ಅಂತ್ಯಗೊಂಡು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಬಡವರಿಗಾಗಿ ನಮ್ಮ ಹೃದಯ ಮಿಡಿಯಬೇಕಾಗಿದೆ. ಸೋಂಕಿನಿಂದ ನರಳಿ ನಮ್ಮನ್ನಗಲಿದವರಿಗಾಗಿ ಶಾಂತಿ ಕೋರುವುದರೊಂದಿಗೆ ದೇಶವನ್ನು ಕೋವಿಡ್ ಮುಕ್ತಗೊಳಿಸಲು ಕೋರಿ ಜಾತಿ, ಮತ ಬೇಧ ಮರೆತು ದೇವರ ಮೊರೆ ಹೋಗುವಂತೆ ಖಲೀಲ್ ಭಾಷಾ ಮನವಿ ಮಾಡಿದ್ದಾರೆ.

error: Content is protected !!