ಕೊಡಗಿನಲ್ಲಿ 5 ಕೋವಿಡ್ ಆರೈಕೆ ಕೇಂದ್ರ ಕಾರ್ಯನಿರ್ವಹಣೆ

12/05/2021

ಮಡಿಕೇರಿ ಮೇ 12 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಸರಣ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಆ ದಿಸೆಯಲ್ಲಿ ಹಲವು ಪ್ರಯತ್ನಗಳು ಜಿಲ್ಲಾಡಳಿತದಿಂದ ನಡೆದಿವೆ. ಕೋವಿಡ್ 19 ಪಾಸಿಟಿವ್ ಬಂದವರನ್ನು ಆರೈಕೆ ಮಾಡುವ ನಿಟ್ಟಿನಲ್ಲಿ ಆಯಾಯ ತಾಲ್ಲೂಕು ವ್ಯಾಪ್ತಿಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸೋಂಕಿತರಿಗೆ ಅಗತ್ಯ ಔಷಧೋಪಚಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 5 ಕಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸದ್ಯ ಮೂರು ತಾಲ್ಲೂಕುಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಲ್ಲಿ ಸೋಂಕಿತರನ್ನು ದಾಖಲು ಮಾಡಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ನವೋದಯ ಶಾಲೆಯಲ್ಲಿ 250 ಹಾಸಿಗೆ, ಕುಶಾಲನಗರ ತಾಲ್ಲೂಕಿನ ಕೂಡಿಗೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ 80 ರಿಂದ 100 ಹಾಸಿಗೆ, ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಬಳಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 80 ಹಾಸಿಗೆ ಇದೆ. ಉಳಿದಂತೆ ಪೊನ್ನಂಪೇಟೆ ತಾಲ್ಲೂಕಿನ ಏಕಲವ್ಯ ವಸತಿ ಶಾಲೆ ಮತ್ತು ಕುಶಾಲನಗರದ ಬಸವನಹಳ್ಳಿ ಶಾಲೆಯನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾಡಲು ಕಾಯ್ದಿರಿಸಲಾಗಿದೆ ಎಂದು ಸಂಬAಧಪಟ್ಟ ತಾಲ್ಲೂಕು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಿಸುವ ಮತ್ತು ಎದುರಿಸುವಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಆ ದಿಸೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 11 ಟೆಂಪೋ ಟ್ರಾವಲರ್, 108 ರ 8 ವಾಹನ, 10 ರಾಜ್ಯ ಆಂಬುಲೆನ್ಸ್, 6 ನಗು-ಮಗು ವಾಹನ, 2 ಸಂಚಾರಿ ವೈದ್ಯಕೀಯ ಘಟಕ, ಶವಸಾಗಿಸುವ 4 ವಾಹನ, ಗಂಟಲು ಮಾದರಿ ದ್ರವ ಸಂಗ್ರಹಿಸಲು 7 ಓಮ್ನಿ ವಾಹನ, ಹಾಗೆಯೇ ಗಂಟಲು ಮಾದರಿ ರವಾನೆಗೆ 15 ಕಾರುಗಳು ಸಂಚಾರ ಮಾಡುತ್ತಿವೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಮಾಹಿತಿ ನೀಡಿದ್ದಾರೆ. ಹೀಗೆ ಕೋವಿಡ್ ನಿಯಂತ್ರಣ ಮಾಡುವಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ.