ಹಬ್ಬವನ್ನು ಹೀಗೂ ಆಚರಿಸಬಹುದು !

14/05/2021

ಸಿದ್ದಾಪುರ ಮೇ 14 : ಕೋವಿಡ್ ಸೋಂಕಿನಿಂದ ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆ ಹಬ್ಬಗಳನ್ನು ಕೂಡ ಆಚರಿಸಲಾಗದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೊಸ ಬಟ್ಟೆ ಖರೀದಿಸುವ ಹಾಗಿಲ್ಲ, ವಿಧ ವಿಧ ಭಕ್ಷ್ಯ ಭೋಜನಗಳನ್ನು ಮಾಡುವಂತ್ತಿಲ್ಲ. ಲಾಕ್ ಡೌನ್ ನಿಂದಾಗಿ ಬಡ ಕುಟುಂಬಗಳಿಗೆ ದಾನವನ್ನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ ಇದೆ.

ಆದರೆ ಈ ಗೊಂದಲದ ಪರಿಸ್ಥಿತಿಯ ನಡುವೆಯೇ ರಂಜಾನ್ ಹಬ್ಬವನ್ನು ಅರ್ಥಪೂರ್ಣಗೊಳಿಸಬೇಕೆನ್ನುವ ಉದ್ದೇಶದಿಂದ ಗ್ರಾ.ಪಂ ಸದಸ್ಯರೊಬ್ಬರು ತಾವು ಪ್ರತಿನಿಧಿಸುತ್ತಿರುವ ವಾರ್ಡ್ ಗೆ ತಮ್ಮ ಸ್ವಂತ ಖರ್ಚಿನಿಂದ ಸ್ಯಾನಿಟೈಸ್ ಮಾಡಿದ್ದಾರೆ.

ಮೊದಲಿನಿಂದಲೂ ಸಾಮಾಜಿಕ ಕಳಕಳಿ ಹೊಂದಿರುವ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯ 6ನೇ ವಾರ್ಡ್ ನಿಂದ  2ನೇ ಬಾರಿಗೆ ಆಯ್ಕೆಯಾದ ಕೆ. ಎಂ.ಮುಸ್ತಫ ಅವರು ಇದೀಗ ಸಂಕಷ್ಟದ ಕಾಲದಲ್ಲಿ ಊರಿಗೆ ನೆರವಾಗಿದ್ದಾರೆ.

ಮನೆಯಲ್ಲೇ ಸರಳ ರೀತಿಯಲ್ಲಿ ರಂಜಾನ್ ಹಬ್ಬ ಆಚರಿಸಿದ ಅವರು ಉಳಿದ ಹಣವನ್ನು ಗ್ರಾಮದ ಆರೋಗ್ಯಕ್ಕಾಗಿ ವಿನಿಯೋಗಿಸಿದ್ದಾರೆ. ಗ್ರಾಮವಿಡೀ ಸ್ಯಾನಿಟೈಸರ್ ಸಿಂಪಡಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ವೈ.ಬಿ.ಸಿ ಯುವಕ ಸಂಘ ಪದಾಧಿಕಾರಿಗಳು ಹಾಗೂ ವಾರ್ಡ್ ವ್ಯಾಪ್ತಿಯ  ಕೊರೊನಾ ವಾರಿಯರ್ಸ್ ತಂಡದೊಂದಿಗೆ  ವಾಹನದಲ್ಲಿ ಡ್ರಮ್ ಗಳ ಮೂಲಕ ಸ್ಯಾನಿಟೈಸರ್ ತುಂಬಿಸಿಕೊಂಡು  5 ಮತ್ತು 6 ನೇ ವಾರ್ಡ್ ಹಾಗೂ ಸುತ್ತಲ ಪ್ರದೇಶಕ್ಕೆ ಸಿಂಪಡಿಸಿದರು.   ಜಂಶೀರ್, ಜಾಫರ್, ರಹೀಮ್, ನೌಫಲ್, ನಿಯಾಸ್, ಹ್ಯಾರಿಸ್, ಸನೀಲ್, ರತೀಶ್, ಸಮೀರ್, ರಫೀಕ್, ಸಾದಿಕ್, ಸಫೀಕ್, ಅಶ್ರಫ್,  ಸಲೀಮ್, ಸಲಾಂ, ನಾಸೀರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.