ಅತ್ಯಂತ ಕಡಿಮೆ ಸಂಖ್ಯೆಯ ವೈದ್ಯರು ಹಾಗೂ ಸೌಲಭ್ಯಗಳಿದ್ದರೂ ಈ ವೈದ್ಯಾಧಿಕಾರಿ ಯಶಸ್ವಿಯಾದರು …

15/05/2021

ಮಡಿಕೇರಿ ಮೇ 15 : ಕೋವಿಡ್ 2ನೇ ಅಲೆಯು ನಿರೀಕ್ಷೆ ಮೀರಿ ಹರಡುತ್ತಿದ್ದು, ವೈದ್ಯರು ಮತ್ತು  ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಕಾರ್ಯ ಒತ್ತಡ ಹೆಚ್ಚಾಗುತ್ತಿದೆ. ಕೋವಿಡ್‍ನ ತೀವ್ರತೆ ಅನೇಕ ಸಂದಿಗ್ಧತೆ ತಂದೊಡ್ಡುತ್ತಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ಚಿಕಿತ್ಸೆ ನೀಡಿ ಜನರ ಜೀವ ಉಳಿಸುತ್ತಿರುವ  ವೈದ್ಯರುಗಳಿಗೆ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೃತಜ್ಞತೆ  ತಿಳಿಸಿ ಅವರ ಕಾರ್ಯವನ್ನು ಪ್ರಶಂಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿ ಕೆಲಸ ಮಾಡಿರುವ ರಾಜ್ಯದ ಆಯ್ದ ಕೆಲವು ವೈದ್ಯಾಧಿಕಾರಿಗಳೊಂದಿಗೆ  ಆನ್‍ಲೈನ್ ಮೂಲಕ ಸಂವಾದ ನಡೆಸಿದ ಅವರು ತಮ್ಮ  ಜೀವದ ಹಂಗನ್ನು ತೊರೆದು ಮಾನವೀಯ ನೆಲೆಗಟ್ಟಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಿವೇಲ್ಲರೂ ನಾಡಿನ ಅಮೂಲ್ಯ ಆಸ್ತಿಯಾಗಿದ್ದು, ಸರ್ಕಾರ ನಿಮ್ಮೆಲ್ಲರ ಪರವಾಗಿರುತ್ತದೆ ಎಂದರು . ನಿಮ್ಮ ಮತ್ತು ಕುಟುಂಬದ ಸದಸ್ಯರ ಆರೋಗ್ಯದ ಕಡೆ ಕೂಡ ಗಮನಹರಿಸಿ ಎಂದು ಅವರು ಹೇಳಿದರು.
    ಮುಖ್ಯಮಂತ್ರಿಯರು ಇಂದು ವಿಡಿಯೋ ಸಂವಾದ ನಡೆಸಿದ‌ ರಾಜ್ಯದ ಆಯ್ದ ಕೆಲವು ವೈದ್ಯಾಧಿಕಾರಿಗಳಲ್ಲಿ ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ದೀಪಕ್ ಕೂಡ  ಒಬ್ಬರಾಗಿದ್ದರು ಎಂಬುದು ಜಿಲ್ಲೆಯ ಹೆಮ್ಮೆಯಾಗಿದೆ.  ಅತ್ಯಂತ ಕಡಿಮೆ ಸಂಖ್ಯೆಯ ವೈದ್ಯರು ಹಾಗೂ ಸೌಲಭ್ಯವನ್ನು ಹೊಂದಿದ್ದರೂ ಗರಿಷ್ಠ ಗುಣಮಟ್ಟದಲ್ಲಿ ,  ಅತ್ಯಂತ ಕಡಿಮೆ ಸಾವಿನ ಸಂಖ್ಯೆಯೊಂದಿಗೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ಸಾಧನೆಯನ್ನು ಮೆಚ್ಚಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವೈದ್ಯಾಧಿಕಾರಿ ಡಾ|| ದೀಪಕ್  ಅವರನ್ನು ಅಭಿನಂದಿಸಿದರು.
   ಮುಂದೆಯೂ ಇಂತಹದ್ದೆ ಸೇವೆಯೊಂದಿಗೆ ಇತರ ತಾಲ್ಲೂಕು ಆಸ್ಪತ್ರೆಗಳಿಗೆ ಪ್ರೇರಣೆಯಾಗಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ಡಾ|| ದೀಪಕ್ ಅವರು ತಾಲ್ಲೂಕು ಆಸ್ಪತ್ರೆಯಲ್ಲಿ  ಮಾಡಿಕೊಂಡಿರುವ ವ್ಯವಸ್ಥೆ ಹಾಗೂ ಕೋವಿಡ್‍ಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ  ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.   
    ಅರಕಲಗೂಡು ತಾಲ್ಲೂಕಿನಲ್ಲಿ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ,ತಾಲ್ಲೂಕಿನಲ್ಲಿ ಎಷ್ಟು ಹಾಸಿಗೆಗಳಿವೆ ,ಎಷ್ಟು ಹಾಸಿಗೆ ಕೋವಿಡ್ ಸೋಂಕಿತರ  ಚಿಕಿತ್ಸೆಗೆ ಮೀಸಲಿರಿಸಲಾಗಿದೆ ,ಔಷಧಿ ಸಾಮಾಗ್ರಿ ಪೂರೈಕೆಗೆ ಯಾವ ಕ್ರಮ ವಹಿಸಲಾಗಿದೆ ಎಂದು ಮುಖ್ಯ ಮಂತ್ರಿಯವರು ಕೇಳಿ ವೈದ್ಯರಿಂದ ಮಾಹಿತಿ ಪಡೆದರು.
ಇದೇ ವೇಳೆ ತಾಲ್ಲೂಕಿನ  ಗ್ರಾಮೀಣ ಪ್ರದೇಶಗಳಲ್ಲಿ  ಪಾಸಿಟಿವಿಟಿ ರೇಟ್  30ಕ್ಕೂ ಅಧಿಕ ಇದ್ದು ಅದನ್ನು ಶೇ 10ಕ್ಕಿಂತ ಕಡಿಮೆ ಮಾಡುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.
::: ಅರಕಲಗೂಡು ಆಸ್ಪತ್ರೆಯ ಸಾಧನೆಯ ನೋಟ :::
ಜಿಲ್ಲೆಯಲ್ಲಿ ಕಡಿಮೆ ವೈದ್ಯಾಧಿಕಾರಿಗಳನ್ನು ಹೊಂದಿರುವ ತಾಲ್ಲೂಕು ಆಸ್ಪತ್ರೆಗಳಲ್ಲಿ ಅರಕಲಗೂಡು ಆಸ್ಪತ್ರೆ ಕೂಡ ಒಂದು ಈ ಆಸ್ಪತ್ರೆ ಒಟ್ಟು 7 ಮಂದಿ ವೈದ್ಯರಿದ್ದು, ತಜ್ಞ ವೈದ್ಯರಾದ ಡಾ|| ದೀಪಕ್ ಆಸ್ಪತ್ರೆಯ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಕೊವಿಡ್ ಚಿಕಿತ್ಸೆ ಗಾಗಿ  ಸಾರ್ವಜನಿಕರಿಗೆ 70 ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲಿ 45 ಬೆಡ್ ಆಕ್ಸಿಜನ್ ಬೆಡ್‍ಗಳಾಗಿವೆ, 25 ಸಾಮಾನ್ಯ ಬೆಡ್‍ಗಳು ಇದ್ದು 6 ಬೆಡ್‍ಗಳು ಹೆಲ್ತೆಕೇರ್ ವರ್ಕರ್ಸ್ ಗಳಿಗೆ  ಮೀಸಲಿರಿಸಲಾಗಿದೆ. ಅಕ್ಸಿಜನ್ ಬೆಡ್‍ಗಳನ್ನು ಕೋವಿಡ್ ವರ್ಕರ್ಸ್‍ಗಳಿಗೆ ಮೀಸಲಿರಿಸಲಾಗಿದೆ, ಇದಲ್ಲದೆ 20 ಕೋವಿಡ್ ಏತರ ಬೆಡ್‍ಗಳಿದ್ದು ಇತರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಸೇವೆಯಲ್ಲಿರುವ ಕೆಲಸಗಾರರಿಗೆ ಉಳಿದುಕೊಳ್ಳಲು 12 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ಕಾರಣಗಳಿಂದ ಈ ಆಸ್ಪತ್ರೆಯಲ್ಲಿ  ಕಳೆದ 2 ವಾರಗಳಿಂದ ಹೆರಿಗೆ ಶಸ್ತ್ರ ಚಿಕಿತ್ಸೆ ನಿಲ್ಲಿಸಲಾಗಿದೆ.ಈ ಆಸ್ಪತ್ರೆಯ ಯಶಸ್ಸಿಗೆ ಜ ಜಿಲ್ಲಾಧಿಕಾರಿ ಆರ್.ಗೀರಿಶ್, ಶಾಸಕರಾದ ಎ.ಟಿ ರಾಮಸ್ವಾಮಿ ಅವರು ಪ್ರೋತ್ಸಾಹ  ಸಹಕಾರ ಕಾರಣ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ , ತಾಲ್ಲೂಕು ವೈದ್ಯಧಿಕಾರಿ ಡಾ|| ಸ್ವಾಮಿಗೌಡ  ಅವರ ಕೂಡ ಸಹಕಾರ ದೊಂದಿಗೆ 
ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ತಜ್ಞ ವೈದ್ಯರಾದ ಡಾ|| ದೀಪಕ್ ಅವರು ವಹಿಸುತ್ತಿರುವ ಕಾಳಜಿ ವಿಶೇಷವಾಗಿ ಪ್ರಶಂಸನೀಯ. 2010ಕ್ಕೆ ಸೇವೆಗೆ ಸೇರಿದ  ಅವರು 11 ವರ್ಷಗಳಿಂದ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2019 ರಿಂದ ಅರಕಲಗೂಡು ಆಸ್ಪತ್ರೆಯಲಿದ್ದು,  ಕಳೆದ 1 ವರ್ಷಗಳಿಂದ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿಯಾಗಿ ಪ್ರಭಾರ ನಿರ್ವಹಿಸುತ್ತಿದ್ದಾರೆ.ಮೊದಲ ಹಂತದ ಕೋವಿಡ್ ಅಲೆಯಲ್ಲಿ ಈ ಆಸ್ಪತ್ರೆಯು 315 ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದು 305 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೇವಲ 2 ಮಂದಿ ಸಾವು ಸಂಭವಿಸಿದ್ದು,  3 ಮಂದಿ ಸೋಂಕಿತರನ್ನು ಇತರ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು.
ಎರಡನೇ ಅಲೆಯ ವೇಳೆ ಈವರೆಗೆ 252 ಸೋಂಕಿತರನ್ನು ದಾಖಲಿಸಿಕೊಂಡಿದ್ದು, 23 ಮಂದಿಯನ್ನು ಇತರೆಡೆಗೆ ರೆಫರ್ ಮಾಡಿ ಕಳುಹಿಸಲಾಗಿದೆ,  156 ಮಂದಿ ಗುಣಮುಖರಾಗಿಸ ಬಿಡುಗಡೆಯಾಗಿದ್ದಾರೆ. ಹಾಲಿ ಮೂರು ಮಂದಿ ಸಾವಿಗೀಡಾಗಿದ್ದಾರೆ.
ಒಟ್ಟಾರೆ ಕೊವಿಡ್ ಚಿಕಿತ್ಸೆ ವ್ಯವಸ್ಥೆಯಲ್ಲಿ ತಾಲ್ಲೂಕು ಆಸ್ಪತ್ರೆಯೊಂದು ಈ ಮಟ್ಟಿಗೆ ಸಾಧನೆ ಮಾಡಿರುವುದು ಅನುಕರಣೀಯ.