ಕೊಡಗು : ಕಳೆದ 24 ಗಂಟೆಗಳಲ್ಲಿ ವಿವಿಧೆಡೆ ದಾಖಲೆ ಮಳೆ : ಹಲವೆಡೆ ಹಾನಿ

16/05/2021

ಮಡಿಕೇರಿ ಮೇ 16 : ಅರಬ್ಬಿ ಸಮುದ್ರದ ಚಂಡಮಾರುತದ ಪರಿಣಾಮ ಕೊಡಗು ಜಿಲ್ಲೆಯಲ್ಲೂ ನಿರಂತರವಾಗಿ ಮಳೆಯಾಗುತ್ತಿದೆ. ಭಾನುವಾರ ಬೆಳಗ್ಗೆ 8.30 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ 67.26 ಮಿ.ಮೀ ಮಳೆಯಾಗಿದೆ.
ಭಾಗಮಂಡಲದಲ್ಲಿ 175.4 ಮಿ.ಮೀ, ನಾಪೋಕ್ಲು 117.8 ಮತ್ತು ವಿರಾಜಪೇಟೆಯಲ್ಲಿ 126.8 ಮಿ.ಮೀ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ.
ನಿರಂತರ ಮಳೆಗೆ ಮಡಿಕೇರಿ ನಗರದ ವಿವಿಧೆಡೆ ಬರೆ ಬಿದ್ದು ಹಾನಿಯಾಗಿದ್ದು, ಓಂಕಾರೇಶ್ವರ ದೇವಾಲಯ ರಸ್ತೆ ಬದಿ ಕುಸಿದಿದೆ.
ಸುಂಟಿಕೊಪ್ಪ ಗ್ರಾ.ಪಂ ವ್ಯಾಪ್ತಿಯಲ್ಲಿ ಬರೆ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ ಕೊಡಗಿನಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಪೊನ್ನಂಪೇಟೆ, ಹುದಿಕೇರಿ ರಸ್ತೆಯ ಮಾಪಿಳೆತೋಡು ತಿರುವಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸೇತುವೆಯ ಜೋಡಣೆಗೆ ಹಾಕಿದ ಮಣ್ಣು ಕುಸಿದಿದೆ.
ಜಿಲ್ಲೆಯ ವಿವಿಧೆಡೆ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಭಾಗಮಂಡಲ, ಕರಿಕೆ, ಸಂಪಾಜೆ, ಚೆಂಬು ಭಾಗದಲ್ಲಿ ಧಾರಾಕಾವಾಗಿ ಮಳೆಯಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಮುಂಜಾಗೃತಾ ಕ್ರಮವಾಗಿ ಎನ್‌ಡಿಆರ್‌ಎಫ್ ನ ಒಂದು ತಂಡ ಮಡಿಕೇರಿಯಲ್ಲಿ ವಾಸ್ತವ್ಯ ಹೂಡಿದೆ. ನೆಲಜಿ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಕೆಲವು ಕಂಬಗಳು ಅಪಾಯದಂಚಿನಲ್ಲಿವೆ.