ವಾಲ್ನೂರು ಬಿಎಸ್‌ಎನ್‌ಎಲ್ ಕಚೇರಿಗೆ ಶಾಶ್ವತ ಬೀಗ ಬೀಳಲಿದೆಯಾ !

16/05/2021

*ಸಿದ್ದಾಪುರ ಮೇ 16 : (ಅಂಚೆಮನೆ ಸುಧಿ) ಗ್ರಾಮೀಣ ಜನರಿಗೆ ವರವಾಗಿದ್ದ ಬಿಎಸ್‌ಎನ್‌ಎಲ್ ದೂರವಾಣಿ ವ್ಯವಸ್ಥೆ ಇದೀಗ ಶಾಪವಾಗಿ ಪರಿಣಮಿಸಿದೆ. ಬಿಎಸ್‌ಎನ್‌ಎಲ್ ಕಚೇರಿಗಳು ನಿರ್ವಹಣೆ ಇಲ್ಲದೆ ನಿರ್ಲಕ್ಷಿಸಲ್ಪಡುತ್ತಿದ್ದು, ಟವರ್‌ಗಳು ಕೂಡ ನಿಷ್ಕಿçಯಗೊಳ್ಳುತ್ತಿವೆ. ನಂಜರಾಯಪಟ್ಟಣದಲ್ಲಿರುವ ವಾಲ್ನೂರು ಬಿಎಸ್‌ಎನ್‌ಎಲ್ ಕಚೇರಿ ಇದಕ್ಕೆ ಉತ್ತಮ ಸಾಕ್ಷಿಯಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಈ ಕಚೇರಿಗೆ ಬೀಗ ಜಡಿಯಲಾಗಿದೆ. ಜನರೇಟರ್ ಕಾರ್ಯ ಸ್ಥಗಿತಗೊಳಿಸಿ ಹಲವು ದಿನಗಳೇ ಕಳೆದಿದೆ. ಇಲ್ಲಿ ಟವರ್, ಕಚೇರಿ, ಜನರೇಟರ್ ಎಲ್ಲವೂ ಮೂಕ ಪ್ರೇಕ್ಷಕರಂತೆ ನಿಂತಿವೆ. ಯಾವುದೇ ಸಿಬ್ಬಂದಿಗಳು ಇತ್ತ ಕಡೆ ತಿರುಗಿಯೂ ನೋಡುತ್ತಿಲ್ಲ. ಸುತ್ತಮುತ್ತಲ ಗ್ರಾಮಸ್ಥರ ದೂರವಾಣಿ ಕಾರ್ಯನಿರ್ವಹಿಸದೆ ತಿಂಗಳುಗಳೇ ಕಳೆದಿದೆ. ಮೊಬೈಲ್ ಗಳಂತೂ ನೆಟ್ ವರ್ಕ್ ಸಿಗದೆ ನಿಷ್ಕಿçಯವಾಗುತ್ತಿವೆ. ಕೋವಿಡ್ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ಮಾಹಿತಿಗಳನ್ನು ಮೊಬೈಲ್ ಮೂಲಕ ಪಡೆಯಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಪರೀಕ್ಷೆಯ ವರದಿಗಳನ್ನು ಪಡೆಯಲು ಮತ್ತು ಲಸಿಕೆ ಮಾಹಿತಿಯನ್ನು ತಿಳಿದುಕೊಳ್ಳಲು ನೆಟ್ ವರ್ಕ್ ಸಮಸ್ಯೆ ಎದುರಾಗಿದೆ.
ಇನ್ನು ಕೆಲವೇ ದಿನಗಳು ಕಳೆದರೆ ವಾಲ್ನೂರು ಬಿಎಸ್‌ಎನ್‌ಎಲ್ ಕಚೇರಿಯ ಪ್ರದೇಶ ಕಾಡುಪಾಲಾಗಲಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಜನೋಪಕಾರಿ ಸಂಸ್ಥೆಯಾಗಿದ್ದ ಬಿಎಸ್‌ಎನ್‌ಎಲ್ ಈ ದುಸ್ಥಿತಿಗೆ ಬಂದು ತಲುಪಿರುವುದು ವಿಷಾದಕರವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮತ್ತು ಜಿಲ್ಲೆ ಕೋವಿಡ್ ಲಾಕ್‌ಡೌನ್ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ವಾಲ್ನೂರು ಬಿಎಸ್‌ಎನ್‌ಎಲ್ ಕಚೇರಿ ಮತ್ತು ಟವರ್ ನ ನೆಟ್ ವರ್ಕ್ ಮೇಲೆ ಅವಲಂಬಿತರಾಗಿದ್ದ ಸುತ್ತಮುತ್ತಲಿನ ಜನ ಇದೀಗ ಯಾವುದೇ ಸಂಪರ್ಕವಿಲ್ಲದೆ ಗೊಂದಲಕ್ಕೆ ಸಿಲುಕಿದ್ದಾರೆ.
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಬಿಎಸ್‌ಎನ್‌ಎಲ್ ವ್ಯವಸ್ಥೆಯನ್ನು ಸುಗಮಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.