ಸಾವಿನ ಪ್ರಮಾಣ ಶೂನ್ಯಕ್ಕೆ ತನ್ನಿ : ಸಚಿವ ವಿ.ಸೋಮಣ್ಣ

ಮಡಿಕೇರಿ ಮೇ 16 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸರಾಸರಿ ಐನೂರರಷ್ಟು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದರೊಂದಿಗೆ ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತರಲು ಶ್ರಮಿಸಬೇಕೆಂದು ತಿಳಿಸಿದ್ದಾರೆ.
ನಗರದ ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ 100 ಹಾಸಿಗೆಯ ಕೋವಿಡ್ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಶೇ.24.9 ಇದ್ದರೆ, ಸಾವಿನ ಪ್ರಮಾಣ 1.17 ರಷ್ಟಿದೆ. ಈ ಸಾವಿನ ಪ್ರಮಾಣವನ್ನು ಕೆಳಕ್ಕೆ ಇಳಿಸುವ ಕಾರ್ಯವಾಗಬೇಕೆಂದು ದೃಢವಾಗಿ ನುಡಿದರು.
ಚಿಕಿತ್ಸಾ ವ್ಯವಸ್ಥೆ ಉದ್ಘಾಟನೆಯ ಬಳಿಕ ಮಾತನಾಡಿದ ಸಚಿವರು, ಮಾರಕ ಕೊರೊನಾ ವೈರಸ್ ಸಾಂಕ್ರಾಮಿಕದ ಬಗ್ಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳ್ಳುವುದು ಅವಶ್ಯ. ಪ್ರಸ್ತುತ ಮುಂಜಾಗ್ರತಾ ಕ್ರಮಗಳಿಲ್ಲದೆ ಅನವಶ್ಯಕವಾಗಿ ತೊಂದರೆಗೆ ಸಿಲುಕುತ್ತಿದ್ದಾರೆ. ಪುಟ್ಟ ಕೊಡಗು ಜಿಲ್ಲೆಯಲ್ಲಿ ಪ್ರತಿನಿತ್ಯ ಹನ್ನೆರಡು, ಹದಿಮೂರು ಮಂದಿ ಸಾಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಂದರ್ಭ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‌ಸಿ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ವೈದ್ಯಕೀಯ ಕಾಲೇಜಿನ ಡೀನ್ ಕಾರ್ಯಪ್ಪ ಮೊದಲಾದವರು ಉಪಸ್ಥಿತರಿದ್ದರು.
::: ಕೂಡಿಗೆ ಆರೈಕೆ ಕೇಂದ್ರಕ್ಕೆ ಭೇಟಿ :::
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಭಾನುವಾರ ಕೂಡಿಗೆ ಬಳಿಯ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾಗಿರುವವರಿಗೆ ನೀಡಲಾಗುವ ಆರೋಗ್ಯ ಕಿಟ್ ಪರಿಶೀಲಿಸಿದರು. ಕೋವಿಡ್ ಸೋಂಕಿತರಿಗೆ ಕಾಲಕಾಲಕ್ಕೆ ಗುಣಮಟ್ಟದ ಬಿಸಿ ಆಹಾರ ಪೂರೈಸಬೇಕು. ಬಿಸಿ ನೀರು ಒದಗಿಸಬೇಕು. ಸಣ್ಣ ಅಪಚಾರವೂ ಉಂಟಾಗದಂತೆ ಮುನ್ನೆಚ್ಚರ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
::: ಪ್ರತಿಯೊಬ್ಬರಿಗೂ ಸೇವೆ ದೊರಕಬೇಕು :::
ಸೋಮವಾರಪೇಟೆಯ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳು ಲಭ್ಯವಾಗಬೇಕು. ದಿನದ 24 ಗಂಟೆಯೂ ವೈದ್ಯಾಧಿಕಾರಿಗಳು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ತುರ್ತು ಆರೋಗ್ಯ ಸ್ಪಂದನೆ ದೊರೆಯಬೇಕು ಎಂದು ಸಚಿವರು ಸೂಚಿಸಿ, ಪಡಿತರ ಚೀಟಿ ಇಲ್ಲದ ಕುಟುಂಬಕ್ಕೂ ಆಹಾರ ಪೂರೈಸುವಂತೆ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.