ಮಡಿಕೇರಿ ವೈದ್ಯಕೀಯ ವಿಭಾಗದ ಮುಖ್ಯಸ್ಥರ ಕಾರ್ಯ ವೈಖರಿಗೆ ತೀವ್ರ ಅಸಮಾಧಾನ

ಮಡಿಕೇರಿ ಮೇ 16 : ಕೊಡಗು ಜಿಲ್ಲೆಯಲ್ಲಿ ಕೋವಿಡ್ 19 ನಿಂದ ಕಳೆದ 18 ದಿನಗಳಿಂದ ಪ್ರತಿನಿತ್ಯ 7 ಮಂದಿ ಮರಣ ಪ್ರಕರಣ ವರದಿಯಾಗುತ್ತಿದ್ದು, ಮರಣ ಪ್ರಮಾಣ ಕಡಿಮೆ ಮಾಡಿದ್ದಲ್ಲಿ ವೈದ್ಯಾಧಿಕಾರಿಗಳ ಪಾದವನ್ನು ತೊಳೆಯುತ್ತೇನೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅವರು ನೋವು ವ್ಯಕ್ತಪಡಿಸಿದ್ದಾರೆ.
ನಗರದ ಹೊರ ವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಭಾನುವಾರ ವೈದ್ಯಕೀಯ ಕಾಲೇಜಿನ ಪ್ರಮುಖರು ಹಾಗೂ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳ ಜೊತೆ ನಡೆದ ನೇರ ಸಂವಾದ ಸಭೆಯಲ್ಲಿ ಸಚಿವರು ಮಾತನಾಡಿದರು.
ಏಪ್ರಿಲ್ 29 ರಂದು 6, 30 ರಂದು 3, ಮೇ 1 ರಂದು 7, 2 ರಂದು 8, 3 ರಂದು 5, 4 ರಂದು 8, 5 ರಂದು 12, 6 ರಂದು 7, 7 ರಂದು 8, 8 ರಂದು 12, 9 ರಂದು 5, 10 ರಂದು 10, 11 ರಂದು 2, 12 ರಂದು 1, 13 ರಂದು 11, 14 ರಂದು 12, 15 ರಂದು 12 ಮತ್ತು 16 ರಂದು 8 ಮಂದಿ ಹೀಗೆ ಕಳೆದ 18 ದಿನಗಳಲ್ಲಿ ಕೋವಿಡ್ 19 ನಿಂದ ಪ್ರತಿನಿತ್ಯ 7 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ ಇದುವರೆಗೆ 233 ಮಂದಿ ಕೋವಿಡ್ 19 ನಿಂದ ಮೃತಪಟ್ಟಿದ್ದಾರೆ ಎಂದು ಸಚಿವರು ಭಾವುಕರಾದರು.
ವೈದ್ಯಾಧಿಕಾರಿಗಳು ಪ್ರತಿಷ್ಠೆಯನ್ನು ಬದಿಗೊತ್ತಿ ಸೇವಾ ಮನೋಭಾವ ಮತ್ತು ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿದ್ದಲ್ಲಿ ಕೋವಿಡ್ 19 ಮರಣವನ್ನು ಸೊನ್ನೆಗೆ ತರಬಹುದಾಗಿದೆ. ಆದರೆ ವೈದ್ಯಾಧಿಕಾರಿಗಳಲ್ಲಿ ಸಾಮಾಜಿಕ ಕಳಕಳಿ ಮತ್ತು ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತದೆ ಎಂದು ವಾಸ್ತವತೆಯ ಬಗ್ಗೆ ಬೆಳಕು ಚೆಲ್ಲಿದರು.
ವೈದ್ಯಾಧಿಕಾರಿಗಳು ತಮ್ಮ ಪ್ರತಿಭೆಯನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಬೇಕಿದೆ. ಕೋವಿಡ್ 19 ನಿಂದ ತೊಂದರೆಗೆ ಸಿಲುಕುವವರಿಗೆ ಕಾಲಮಿತಿಯೊಳಗೆ ಒಳ್ಳೆಯ ಔಷಧಿ ನೀಡಿ ಬದುಕಿಸಬೇಕಿದೆ ಎಂದು ಸಚಿವರು ಕಳಕಳಿ ವ್ಯಕ್ತಪಡಿಸಿದರು.
ಕೊಡಗು ಜನಸಂಖ್ಯೆಯಲ್ಲಿ ಚಿಕ್ಕ ಜಿಲ್ಲೆಯಾಗಿದ್ದು, ಒಂದು ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಎರಡು ತಾಲ್ಲೂಕು ಆಸ್ಪತ್ರೆ, ಹಲವು ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಒಳಗೊಂಡಿದ್ದು, ಆಸ್ಪತ್ರೆಗಳು ಸುಸಜ್ಜಿತವಾಗಿವೆ, ಜೊತೆಗೆ ತಜ್ಞ ವೈದ್ಯರಿದ್ದಾರೆ. ಆದರೂ ಮರಣ ಪ್ರಮಾಣ ಕಡಿಮೆಯಾಗುತ್ತಿಲ್ಲ ಏಕೆ ಎಂದು ಪ್ರತಿಯೊಬ್ಬರೂ ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ನುಡಿದರು.
ನನ್ನ ಎರಡು ಮಕ್ಕಳು ಮತ್ತು ಸೊಸೆ ಅವರು ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ವೈದ್ಯಕೀಯ ಕ್ಷೇತ್ರದ ಬಗ್ಗೆ ಜ್ಞಾನವಿದೆ. ಆ ದಿಸೆಯಲ್ಲಿ ತಮ್ಮ ಆರೋಗ್ಯವನ್ನೂ ನೋಡಿಕೊಂಡು, ಇತರ ಶ್ರೀಸಾಮಾನ್ಯರ ಆರೋಗ್ಯವನ್ನು ಕಾಪಾಡುವುದು ಆದ್ಯತೆಯಾಗಬೇಕು ಎಂದು ವಿ.ಸೋಮಣ್ಣ ಅವರು ತಿಳಿಸಿದರು.
ಕೋವಿಡ್ 19 ನಂತಹ ಸಾಂಕ್ರಾಮಿಕ ರೋಗದ ಸಂಧಿಗ್ಧ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದು ವೈದ್ಯಾಧಿಕಾರಿಗಳಿಗೆ ಸವಾಲಾಗಿದೆ. ಆ ಸವಾಲನ್ನು ಎದುರಿಸಿ ಜನ ಸಾಮಾನ್ಯರನ್ನು ಬದುಕಿಸುವುದು ಅಗತ್ಯ. ಆ ದಿಸೆಯಲ್ಲಿ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
‘ವೈದ್ಯರು ತಮ್ಮ ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ವೈದ್ಯಕೀಯ ಕಾಲೇಜು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಕಾರ್ಯ ವೈಖರಿಯನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ತಮ್ಮನ್ನೆ ಬದಲಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.’
ಕೊಡಗು ಜಿಲ್ಲೆಯ ಸೂಕ್ಷö್ಮತೆ ಅರ್ಥಮಾಡಿಕೊಂಡು , ಮಾನವೀಯತೆಯಿಂದ ಕಾರ್ಯ ನಿರ್ವಹಿಸಬೇಕು. ಸರ್ಕಾರದಿಂದ ಅಗತ್ಯ ಸೌಲಭ್ಯ ಮತ್ತು ಸವಲತ್ತುಗಳನ್ನು ಕೊಡಿಸಬಹುದು, ಆದರೆ ಜನರ ಪ್ರಾಣ ಉಳಿಸುವುದು ನೀವೇ(ವೈದ್ಯರು) ಎಂಬುದನ್ನು ಮರೆಯಬಾರದು ಸಚಿವರು ಮಾರ್ಮಿಕವಾಗಿ ನುಡಿದರು.
ವೈದ್ಯಕೀಯ ಕ್ಷೇತ್ರದ ಬಗ್ಗೆ ಇರುವ ಗೌರವವನ್ನು ಮತ್ತಷ್ಟು ಹೆಚ್ಚಿಸಬೇಕು. ಆ ನಿಟ್ಟಿನಲ್ಲಿ ಕಾರ್ಯ ನಿಷ್ಠೆ ಮತ್ತು ಕಾರ್ಯ ತತ್ಪರತೆಯಿಂದ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಚಾಟಿ ಬೀಸಿದರು.
ಕೊಡಗು ವೈದ್ಯಕೀಯ ಕಾಲೇಜು ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಸಿಸಿ ಟಿ ಅಳವಡಿಸಬೇಕು. ಪ್ರತಿ ದಿನ ಜಿಲ್ಲಾಧಿಕಾರಿ ಅವರೊಂದಿಗೆ ವಿಡಿಯೊ ಸಂವಾದ ನಡೆಸಬೇಕು ಎಂದು ವಿ.ಸೋಮಣ್ಣ ಅವರು ಸಲಹೆ ಮಾಡಿದರು. ನಿಮ್ಮ ಆರೋಗ್ಯದ ಜೊತೆಗೆ ಜನ ಸಾಮಾನ್ಯರ ಆರೋಗ್ಯವನ್ನು ಕಾಪಾಡುವತ್ತ ವೈದ್ಯರು ಮುಂದಾಗಬೇಕು ಎಂದು ವಸತಿ ಸಚಿವರು ಹೇಳಿದರು.
ವೈದ್ಯರು ಜನ ಸಾಮಾನ್ಯರಿಗೆ ಒಳಿತು ಮಾಡಬೇಕು. ಕಲಿತಿರುವ ವಿದ್ಯೆಯನ್ನು ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು. ನಿಮ್ಮ(ವೈದ್ಯರ) ಆರೋಗ್ಯದ ಜೊತೆಗೆ ಜನ ಸಾಮಾನ್ಯರ ಆರೋಗ್ಯ ಸುಧಾರಿಸುವಲ್ಲಿ ಶ್ರಮಿಸಬೇಕು ಎಂದರು.
ಕೋವಿಡ್ 19 ಮರಣ ಸಂಬಂಧ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ಡೈರೆಕ್ಟರ್, ಅಧೀಕ್ಷಕರು ಮತ್ತು ಡಿಎಚ್‌ಒ ಅವರು ತಮ್ಮ ಆಡಳಿತ ವೈಖರಿಯನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ತಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಸಂಕಷ್ಟದ ಸಂದರ್ಭದಲ್ಲಿ ನೋವು ಅನುಭವಿಸುತ್ತಿರುವ ಕುಟುಂಬಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ವಿ.ಸೋಮಣ್ಣ ಅವರು ಹೇಳಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಕೊಡಗು ವೈದ್ಯಕೀಯ ವಿಜ್ಞಾನ ವಿಭಾಗದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು ಪಿಪಿಇ ಕಿಟ್ ಧರಿಸಿ ಸೋಂಕಿತರ ಯೋಗಕ್ಷೇಮ ವಿಚಾರಿಸಬೇಕು. ಸೋಕಿತರಿಗೆ ದೈರ್ಯ ತುಂಬಬೇಕು. ಉತ್ತಮ ಔಷಧಿ ನೀಡಿ ಉಪಚರಿಸಬೇಕು. ಅದನ್ನು ಬಿಟ್ಟು ಯಾರೋ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಕಚೇರಿಯಲ್ಲಿ ಕುಳಿತರೆ ಶ್ರೀಸಾಮಾನ್ಯರಿಗೆ ಒಳಿತಾಗುವುದಿಲ್ಲ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಅವಕಾಶ ಮತ್ತು ಸವಾಲು ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ವೈದ್ಯಕೀಯ ಕಾಲೇಜಿನಲ್ಲಿ ಮುಂಚೂಣಿಯಲ್ಲಿರುವ ವೈದ್ಯಾಧಿಕಾರಿಗಳು ವೃತ್ತಿಪರತೆ ಹೆಚ್ಚಿಕೊಂಡು ಕಾರ್ಯ ನಿರ್ವಹಿಸಬೇಕು. ಜನ ಮೆಚ್ಚುವಂತೆ ಬದ್ಧತೆಯಿಂದ ಕೆಲಸ ಮಾಡಬೇಕು. ಸಹಾಯವಾಣಿ ಕೇಂದ್ರಕ್ಕೆ ಸಾರ್ವಜನಿಕರು ಕರೆ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಮತ್ತು ಸ್ಪಂದನೆ ಇರಬೇಕು ಎಂದು ಅವರು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಇಲ್ಲಿನ ಜನರು ಸೇನೆ ಸೇರಿ ಚಳಿ, ಗಾಳಿ, ಮಳೆಯಲ್ಲಿಯೂ ರಾಷ್ಟçದ ಗಡಿ ಕಾಯುತ್ತಾರೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಹೀಗೆ ಹಲವರು ಸೇನಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಅವರಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ವೈದ್ಯರು ಮಹತ್ತರ ಸಾಧನೆ ಮಾಡಬೇಕು, ಜನರ ಜೀವ ಉಳಿಸಬೇಕು ಎಂದು ಅವರು ಕೋರಿದರು.
ಜಿಲ್ಲಾಧಿಕಾರಿ ಚಾರುಲತ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಅಧೀಕ್ಷಕರಾದ ಡಾ.ಲೋಕೇಶ್, ಡಿಎಚ್‌ಒ ಡಾ.ಕೆ.ಮೋಹನ್, ಡಾ.ಮಂಜುನಾಥ್, ಆಡಳಿತಾಧಿಕಾರಿ ಡಾ.ನಂಜುಂಡೇಗೌಡ, ಹಲವು ವೈದ್ಯಕೀಯ ವಿಭಾಗದ ಮುಖ್ಯಸ್ಥರು, ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿ ಇತರರು ಇದ್ದರು.