ಕೊಡಗಿಗೆ ವಿದ್ಯುತ್ ಚಿತಾಗಾರದ ಅಗತ್ಯವಿದೆ : ಸಚಿವರು ಏನು ಹೇಳಿದ್ರು !

16/05/2021

ಮಡಿಕೇರಿ ಮೇ 16 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾದಕರ. ಜಿಲ್ಲೆಗೆ ವಿದ್ಯುತ್ ಚಿತಾಗಾರ ಅತ್ಯವಶ್ಯಕವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಈ ಸಂದಿಗ್ಧ ಪರಿಸ್ಥಿತಿಯನ್ನು ವಿಶೇಷ ಸಂದರ್ಭವೆಂದು ನಿರ್ಧರಿಸಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ತಕ್ಷಣವೇ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೇ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಪ್ರಮಾಣ ಹಾಗೂ ಆಕ್ಸಿಜನ್ ಅವಲಂಬಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಹೊರತುಪಡಿಸಿ ಯಾವುದೇ ಖಾಸಗಿ ಆಸ್ಪತ್ರೆ ಲಭ್ಯವಿಲ್ಲದಿರುವುದರಿಂದ ತುರ್ತು ಮುನ್ನೆಚ್ಚರಿಕಾ ಕ್ರಮವಾಗಿ ಕನಿಷ್ಠ 450 ಆಕ್ಸಿಜನ್ ಸಿಲಿಂಡರ್‌ಗಳು, 5 ಎಲ್‌ಪಿಎಂನ ಕನಿಷ್ಠ 500 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು, 10 ಎಲ್.ಪಿ.ಎಂ.ನ ಕನಿಷ್ಠ 250 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು, 20 ವೆಂಟಿಲೇಟರ್‌ಗಳು, 2000 ಆಕ್ಸಿ ಮೀಟರ್‌ಗಳು, 15,000 ರೆಮಿಡಿಸಿವಿರ್ ಇಂಜೆಕ್ಷನ್ ಸೇರಿದಂತೆ ಇತ್ಯಾದಿ ಅಗತ್ಯ ಔಷಧಿಗಳನ್ನು ಜಿಲ್ಲೆಗೆ ತುರ್ತಾಗಿ ಸರಬರಾಜು ಮಾಡಲು ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಅವರು ತಕ್ಷಣ ಜಿಲ್ಲೆಗೆ ಈ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡಲು ಸೂಚಿಸಿದ್ದು, ಅದರಂತೆ ನಿನ್ನೆ ದಿನ ಜಿಲ್ಲೆಗೆ 50 ಆಕ್ಸಿಜನ್ ಸಿಲಿಂಡರ್, 30 ಆಕ್ಸಿಜನ್ ಕಾನ್ಸಂಟ್ರೇರ‍್ಸ್, 10 ವೆಂಟಿಲೇಟರ್, 1500 ಆಕ್ಸಿಮೀಟರ್ ಹಾಗೂ 520 ರೆಮಿಡಿಸಿವರ್ ಇಂಜೆಕ್ಷನ್ ಹಾಗೂ ಅಗತ್ಯ ಔಷಧಿಗಳನ್ನು ಜಿಲ್ಲೆಗೆ ಸರಬರಾಜು ಮಾಡಲಾಗಿದೆ ಎಂದು ವಿ.ಸೋಮಣ್ಣ ಅವರು ಹೇಳಿದರು.