ಉಪ್ಪು ಉಪ್ಪು ಉಪ್ಪಿಟ್ಟು : ಸೋಂಕಿತರ ಅಸಮಾಧಾನ

May 17, 2021

ಮಡಿಕೇರಿ ಮೇ 17 : ಕೊಡಗು ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಹಾಗೂ ಗುಣಮಟ್ಟದ ಆಹಾರ ನೀಡುವಂತೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ಜಿಲ್ಲೆಯಿಂದ ನಿರ್ಗಮಿಸಿದ್ದಾರೆ. ಸಚಿವರು ಜಿಲ್ಲೆಯಿಂದ ಮರಳಿದ ಬೆನ್ನಲ್ಲೇ ನಗರದ ಹೊರ ವಲಯದ ನವೋದಯ ಶಾಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮತ್ತದೇ ಗುಣಮಟ್ಟ ರಹಿತ ಆಹಾರವನ್ನು ವಿತರಿಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಸೋಮವಾರ ಬೆಳಗ್ಗೆ ಕೋವಿಡ್ ಸೋಂಕಿತರಿಗೆ ಪೂರೈಸಿರುವ ಉಪ್ಪಿಟ್ಟು ಸಂಪೂರ್ಣ ಉಪ್ಪುಮಯವಾಗಿದ್ದು, ಇದನ್ನು ತಿನ್ನಲಾಗದೆ ಕೋವಿಡ್ ಸೋಂಕಿತರು ಕೋವಿಡ್ ಕೇರ್ ಸೆಂಟರ್ ಎದುರು ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ಆಹಾರವನ್ನು ಪೂರೈಸುವ ಬದಲು ನಮ್ಮನ್ನು ನಮ್ಮ ಮನೆಗಳಿಗೆ ಕಳುಹಿಸಿ, ಮನೆಯಲ್ಲಿಯೇ ಬಿಸಿಯಾದ ಉತ್ತಮ ಗುಣಮಟ್ಟದ ಆಹಾರ ಸೇವಿಸುತ್ತೇವೆ. ನೀವು ನೀಡುವ ಆಹಾರ ತಿಂದಲ್ಲಿ ನಾವುಗಳು ಇಲ್ಲಿಯೇ ರೋಗಿಗಳಾಗಿ ಉಳಿಯಬೇಕಾಗುತ್ತದೆ ಎಂದು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೆಚ್ಚಿನ ಪ್ರಮಾಣದ ಉಪ್ಪು ಹಾಕಿದ ಉಪ್ಪಿಟ್ಟು ಸೇವಿಸಿದರೆ ರಕ್ತದ ಒತ್ತಡ, ಸಕ್ಕರೆ ಖಾಯಿಲೆ ಇರುವ ರೋಗಿಗಳ ಸ್ಥಿತಿ ಏನಾಗಬೇಕು ಎಂದು ಸೋಂಕಿತರು ಪ್ರಶ್ನಿಸಿದರು. ಆಹಾರ ಪೂರೈಸಿದವರನ್ನು ಪ್ರಶ್ನಿಸಿದರೆ ಉಪ್ಪಿಟ್ಟಿಗೆ ಚಟ್ನಿ ಸೇರಿಸಿ ತಿನ್ನಿ ಎಂದು ಉಡಾಫೆಯಿಂದ ಉತ್ತರಿಸುತ್ತಾರೆ. ಈ ಆಹಾರವನ್ನು ತಿನ್ನಲು ಸಾಧ್ಯವಿಲ್ಲ, ಇದರಿಂದ ನಮಗೆ ಆರೋಗ್ಯವೂ ಸಿಗುವುದಿಲ್ಲ. ಮೊದಲು ನಮ್ಮನ್ನು ಇಲ್ಲಿಂದ ಮನೆಗೆ ಕಳುಹಿಸಿ ಎಂದು ಒತ್ತಾಯಿಸಿದರು. ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಗಳ ಆಗರವಾಗಿದ್ದು, ಪ್ರತಿ ನಿತ್ಯವೂ ಇಂತಹ ಪ್ರಕರಣಗಳು ನಡೆಯುತ್ತಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕೆಂದು ಸೋಂಕಿತರು ಆಗ್ರಹಿಸಿದರು.

error: Content is protected !!