ಕಾಡು ಕುರಿ ಬೇಟೆ : ಇಬ್ಬರ ಬಂಧನ

17/05/2021

ಮಡಿಕೇರಿ ಮೇ 17 : ಸೋಮವಾರಪೇಟೆ ಜೇನುಕಲ್ಲು ಬೆಟ್ಟ ಮೀಸಲು ಅರಣ್ಯದಲ್ಲಿ ಜಿಂಕೆ ಮತ್ತು ಕಾಡು ಕುರಿಯನ್ನು ಬೇಟೆಯಾಡಿ ಅದನ್ನು ಮಾಂಸ ಮಾಡಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಸೋಮವಾರಪೇಟೆ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹೊಸಳ್ಳಿ ಗ್ರಾಮದ ಕಾವೇರಪ್ಪ ಅಲಿಯಾಸ್ ತಮ್ಮು ಮತ್ತು ಸುರೇಶ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 2 ಕೆ.ಜಿ. ಜಿಂಕೆ ಮಾಂಸ, 3 ಕೆ.ಜಿ. ಕಾಡು ಕುರಿ ಮಾಂಸ, 1 ಜಿಂಕೆ ಚರ್ಮ, ಕೃತ್ಯಕ್ಕೆ ಬಳಸಿದ್ದ 1 ಒಂಟಿ ನಳಿಗೆ ಬಂದೂಕು, 3 ಜೀವಂತ ಕಾಡತೂಸು ಹಾಗೂ 1 ಬಳಸಿದ ಕಾಡತೂಸನ್ನು ವಶಕ್ಕೆ ಪಡೆಯಲಾಗಿದೆ.
ಹೊಸಳ್ಳಿ ಗ್ರಾಮದ ಕಾವೇರಪ್ಪ ಮತ್ತು ಸುರೇಶ ಎಂಬವರ ಮನೆಯಲ್ಲಿ ಕಾಡು ಪ್ರಾಣಿಯ ಮಾಂಸ ಸಂಗ್ರಹಿಸಿರುವ ಬಗ್ಗೆ ಸೋಮವಾರಪೇಟೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೋಮವಾರ ಬೆಳಗಿನ ಜಾವ ಖಚಿತ ಸುಳಿವು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾವೇರಪ್ಪ ಅವರ ಮನೆಯಲ್ಲಿ ಶೋಧ ನಡೆಸಿದ ಸಂದರ್ಭ ಎರಡನೇ ಆರೋಪಿ ಸುರೇಶ ಕೂಡ ಸ್ಥಳದಲ್ಲಿ ಹಾಜರಿದ್ದು, ಮನೆಯಲ್ಲಿ 2 ಕೆ.ಜಿ. ಜಿಂಕೆ ಮಾಂಸ, 3 ಕೆ.ಜಿ. ಕಾಡುಕುರಿ ಮಾಂಸ ಪತ್ತೆಯಾಗಿದೆ.
ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಜೇನುಕಲ್ಲು ಬೆಟ್ಟ ಮೀಸಲು ಅರಣ್ಯದ ಹಿರಿಕೆರೆ ಎಂಬಲ್ಲಿ ಪ್ರಮುಖ ಆರೋಪಿ ಕಾವೇರಪ್ಪ ಗುಂಡು ಹೊಡೆದು ಜಿಂಕೆ ಮತ್ತು ಕುರಿಯನ್ನು ಕೊಂದಿದ್ದಾನೆ. ನಂತರ ಇಬ್ಬರು ಸೇರಿ ಸ್ಥಳದಲ್ಲೇ ಮಾಂಸ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪೊಇಗಳ ವಿರುದ್ದ 1972 ವನ್ಯಜೀವಿ ಸಂರಕ್ಷಣಾ ಕಾಯಿದೆ ಕಲಂ 9, 39, 50, 51, 56 ಹಾಗೂ ಕರ್ನಾಟಕ ಅರಣ್ಯ ಕಾಯಿದೆ ಮತ್ತು ಶಸ್ತಾçಸ್ತç ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.