ಔಷಧಿಗಳನ್ನು ಉಚಿತವಾಗಿ ನೀಡಿದ ಔಷಧಿ ವಿತರಕರ ಸಂಘ

May 17, 2021

ಮಡಿಕೇರಿ ಮೇ 17 : ಕೋವಿಡ್ ಸೋಂಕಿತರ ಚಿಕಿತ್ಸೆಗೆಗಾಗಿ ಅತ್ಯಗತ್ಯವಾಗಿರುವ 5 ಬಗೆಯ ಔಷಧಿಗಳನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಕೋರಿಯ ಮೇರೆಗೆ ಕೊಡಗು ಜಿಲ್ಲಾ ಔಷಧಿ ವಿತರಕರ ಸಂಘ ಉಚಿತವಾಗಿ ಜಿಲ್ಲಾಡಳಿತಕ್ಕೆ ವಿತರಿಸಿದರು. ಒಟ್ಟು 1.35 ಲಕ್ಷ ರೂ. ಮೊತ್ತದ ಕೋವಿವಿಲ್, ಐವರೇಸನ್, ಡಾಕ್ಸಿಟಾಪ್, ಝಿಂಕೋಮಿಟ, ಆಮ್ಸಿ ಮಾತ್ರೆಗಳನ್ನು ಔಷಧಿ ವಿತರಕರ ಸಂಘದ ಪದಾಧಿಕಾರಿಗಳು ಜಿಲ್ಲೆಯ ವಿವಿಧ ಕಡೆಗಳಿಂದ ಸಂಗ್ರಹಿಸಿ ಜಿಲಾಡಳಿತಕ್ಕೆ ಹಸ್ತಾಂತರಿಸಿದರು.
ದೇಶದೆಲ್ಲಡೆ ಈ ಮಾತ್ರೆಗಳಿಗೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ನಿಗಧಿತ ಸಮಯಕ್ಕೆ ಸರಕಾರಕ್ಕೆ ಈ ಔಷಧಿಗಳು ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಖಾಸಗಿ ಔಷಧಿ ವಿತರಕರಲ್ಲಿ ಮೇಲಿನ ಔಷಧಿಗಳನ್ನು ವಿತರಿಸುವಂತೆ ಮನವಿ ಮಾಡಿತ್ತು. ಕೋವಿಡ್ ಸೋಂಕಿತರ ಆರೋಗ್ಯದ ದೃಷಿಯಿಂದ ಪ್ರತಿ ಮಾತ್ರೆಗಳಿಗೆ ಹಣ ಪಾವತಿಸಿ ಎಲ್ಲೆಡೆಯಿಂದ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಉಚಿತವಾಗಿ ಔಷಧಿ ಹಸ್ತಾಂತರ ಮಾಡಲಾಗಿದೆ ಎಂದು ಔಷಧಿ ವಿತರಕರ ಸಂಘದ ಜಿಲ್ಲಾಧ್ಯಕ್ಷ ಅಂಬೇಕಲ್ ಜೀವನ್ ಕುಶಾಲಪ್ಪ ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕುಮಾರ್ ಖಂಡು, ಅಪರ ಜಿಲ್ಲಾಧಿಕಾರಿ ರಾಜು. ಕೆ. ಮೊಗವೀರ, ಜಿಲ್ಲಾ ಸಹಾಯಕ ಔಷಧ ನಿಯಂತ್ರಕರಾದ ಗುರುನಾಥ್, ಔಷಧಿ ವಿತರಕರ ಸಂಘದ ಪುರುಷೋತ್ತಮ್, ವಿನೋದ್ ಮತ್ತಿತ್ತರರು ಹಾಜರಿದ್ದರು.

error: Content is protected !!