ಅಕ್ರಮ ಮದ್ಯ ಸಾಗಾಟ : ಇಬ್ಬರ ಬಂಧನ

17/05/2021

ಮಡಿಕೇರಿ ಮೇ 17 : ತರಕಾರಿ ಸಾಗಿಸುವ ವಾಹನದಲ್ಲಿ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಗೋಣಿಕೊಪ್ಪ ಪೊಲೀಸರು ಆನೆಚೌಕೂರು ಚೆಕ್ ಪೋಸ್ಟ್ನಲ್ಲಿ ಮಾಲು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಇರಟ್ಟಿ ತಾಲ್ಲೂಕಿನ ಅನೂಪ್ ಕುಮಾರ್(36) ಹಾಗೂ ಉದಯ್ ಕುಮಾರ್(34) ಎಂಬವರೇ ಬಂಧಿತ ಆರೋಪಿಗಳಾಗಿದ್ದರೆ. ಬಂಧಿತ ಆರೋಪಿಗಳಿಂದ 1.12 ಲಕ್ಷ ರೂ. ಮೌಲ್ಯದ 290 ಬಾಟಲಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸೋಮವಾರ ಬೆಳಿಗ್ಗೆ 11 ಗಂಟೆಯ ಸಮಯದಲ್ಲಿ ಹುಣಸೂರುನಿಂದ ತಿತಿಮತಿ ಮಾರ್ಗವಾಗಿ ಕೇರಳಕ್ಕೆ ತೆರಳಲು ತರಕಾರಿ ತುಂಬಿದ ವ್ಯಾನ್(ಕೆ.ಎಲ್.58-ವೈ.2997) ಆನೆಚೌಕೂರು ಚೆಕ್ ಪೋಸ್ಟ್ ಬಳಿ ಆಗಮಿಸಿದೆ. ಈ ಸಂದರ್ಭ ಗೋಣಿಕೊಪ್ಪ ಪೋಲಿಸರು ವಾಹನವನ್ನು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಓಲ್ಡ್ ಎಡ್ಮಿರಲ್ ಹಾಗೂ ಬಿಜಾಯಿಸ್ ಕಂಪೆನಿಗಳ 290 ಮದ್ಯ ಬಾಟಲಿಗಳು ಪತ್ತೆಯಾಗಿವೆ. ತಕ್ಷಣವೇ ವಾಹನದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೂಡಲೇ ವಾಹನ ಸಹಿತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಪೋಲಿಸರು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಗೋಣಿಕೊಪ್ಪ ವೃತ್ತ ನೀರಿಕ್ಷಕ ಜಯರಾಂ ನಿರ್ದೇಶನದ ಮೇರೆಗೆ ನಡೆಸಲಾದ ಕಾರ್ಯಾಚರಣೆಯಲ್ಲಿ ಸಬ್‌ಇನ್ಸ್ಪೆಕ್ಟರ್ ಸುಬ್ಬಯ್ಯ, ಎ.ಎಸ್.ಐ. ದೇವರಾಜ್, ಸುಬ್ರಮಣಿ, ಕ್ರೈಂ ಬ್ರಾಂಚ್ನ ಕೃಷ್ಣ, ರಾಘವೇಂದ್ರ, ಉಮೇಶ್ ಹಾಗೂ ಕೃಷ್ಣಕುಮಾರ್ ಪಾಲ್ಗೊಂಡಿದ್ದರು.