ಮಾನಸಿಕ ಸ್ಥೈರ್ಯ ತುಂಬಿ ಸಾವಿನ ಪ್ರಮಾಣ ತಗ್ಗಿಸಿ : ಎಂಎಲ್‌ಸಿ ವೀಣಾಅಚ್ಚಯ್ಯ ಸಲಹೆ

17/05/2021

ಮಡಿಕೇರಿ ಮೇ 17 : ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ, ಇದೇ ಕಾರಣಕ್ಕೆ ಕೋವಿಡ್ ಸೋಂಕಿತರು ಆತಂಕಕ್ಕೀಡಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಕೌನ್ಸಿಲಿಂಗ್ ಮೂಲಕ ಮಾನಸಿಕ ಸ್ಥೈರ್ಯ ತುಂಬುವ ಅನಿವಾರ್ಯತೆ ಇದೆ. ಹೀಗೆ ಮಾಡುವುದರಿಂದ ಮಾತ್ರ ಸಾವಿನ ಪ್ರಮಾಣವನ್ನು ತಗ್ಗಿಸಲು ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಅವರು ಸೋಂಕಿತರಿಗೆ ಢ್ರೈ ಫ್ರೂಟ್ ಗಳನ್ನು ವಿತರಿಸಿ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕೆಲವು ಸಲಹೆಗಳನ್ನು ನೀಡಿದರು.
ನಂತರ ಮಾತನಾಡಿದ ವೀಣಾಅಚ್ಚಯ್ಯ ಅವರು ಆಸ್ಪತ್ರೆಯಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿದೆ. ವೈದ್ಯರು, ಶ್ರುಶೂಷಕಿಯರು ಹಾಗೂ ಇತರ ಸಿಬ್ಬಂದಿಗಳು ಕಾರ್ಯೋನ್ಮುಖರಾಗಿದ್ದಾರೆ. ಆದರೆ ಸೋಂಕಿತರು ಮಾತ್ರ ಭೀತಿಯ ವಾತಾವರಣವನ್ನು ಎದುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸೋಂಕಿತರಿಗೆ ಅನಿವಾರ್ಯವಾಗಿ ಕೌನ್ಸಿಲಿಂಗ್ ಆಗಲೇಬೇಕಾಗಿದೆ, ಭವಿಷ್ಯದ ಬಗ್ಗೆ ಭರವಸೆ ಮೂಡಿಸುವುದರೊಂದಿಗೆ ಆಸ್ಪತ್ರೆಯಲ್ಲೂ ಮನೆಯ ವಾತಾವರಣ ಮೂಡಿಸಿದರೆ ಖಂಡಿತವಾಗಿ ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ಕೊಂಡೊಯ್ಯಬಹುದಾಗಿದೆ ಎಂದು ತಿಳಿಸಿದ ಅವರು, ಪ್ರತಿದಿನ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಅವಕಾಶ ನೀಡಿದರೆ ಉತ್ತಮವೆಂದು ಸಲಹೆ ನೀಡಿದರು.
ಸೋಂಕಿತರಿಗೆ ಉತ್ತಮ ಚಿಕಿತ್ಸೆಯೊಂದಿಗೆ ಧೈರ್ಯ ತುಂಬುವ ಕಾರ್ಯ ಆಗಲೇ ಬೇಕಾಗಿದೆ. ಭಯದಿಂದ ಸಾವನ್ನಪ್ಪುವುದನ್ನು ತಪ್ಪಿಸಲು ಆಸ್ಪತ್ರೆಯಲ್ಲಿ 2-3 ದಿನಗಳಿಗೊಮ್ಮೆಯಾದರೂ ಕೌನ್ಸಿಲಿಂಗ್ ನಡೆಯಬೇಕು ಎಂದರು.
::: ಸೇವೆ ಶ್ಲಾಘನೀಯ :::
ಕೊಡಗಿನಿಂದ ಕೋವಿಡ್ ಸೋಂಕು ನಿವಾರಣೆ ಮಾಡಲು ಮತ್ತು ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಆಸ್ಪತ್ರೆಯ ಬಳಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಕರ ಕಾರ್ಯ ಇತರರಿಗೆ ಮಾದರಿಯಾಗಿದೆ. ಇಲ್ಲಿ ಯಾವುದೇ ಜಾತಿ, ಮತ, ಬೇಧ ಭಾವವಿಲ್ಲದೆ ಸೋಂಕಿತರ ಮತ್ತು ಕುಂಟುಬದವರ ನೋವಿಗೆ ಸ್ಪಂದಿಸುತ್ತಿದ್ದಾರೆ. ಜಾತಿ ರಾಜಕಾರಣ ಮಾಡುವ ರಾಜಕಾರಣಿಗಳು ಈ ಸ್ವಯಂ ಸೇವಕರಿಂದ ಕಲಿಯುವುದು ಸಾಕಷ್ಟಿದೆ ಎಂದು ವೀಣಾಅಚ್ಚಯ್ಯ ಇದೇ ಸಂದರ್ಭ ತಿಳಿಸಿದರು.
ಸೋಂಕಿತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದೆ ಧೈರ್ಯವಾಗಿ ಪರಿಸ್ಥಿತಿಯನ್ನು ಗೆಲ್ಲುವಂತೆ ಮನವಿ ಮಾಡಿದ ಅವರು, ಸಾರ್ವಜನಿಕರು ಮತ್ತಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಆದಷ್ಟು ಬೇಗ ಕೊಡಗು ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸಲು ಸಹಕರಿಸುವಂತೆ ಕೋರಿದರು.
ಈ ಸಂದರ್ಭ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕ ಡಾ.ಲೋಕೇಶ್, ವೈದ್ಯ ಡಾ.ಶಶಾಂಕ್, ವಿಧಾನ ಪರಿಷತ್ ಸದಸ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಮುಖರಾದ ಶಾಂತೆಯAಡ ವಿಶಾಲ್ ಕಾರ್ಯಪ್ಪ ಹಾಜರಿದ್ದರು.