ಸೋಂಕಿತರ ಶವ ಸಂಸ್ಕಾರ : ಸೇವಾ ಭಾರತಿ ಸ್ವಯಂ ಸೇವಕರ ಸೇವೆ ಶ್ಲಾಘನೀಯ

18/05/2021

ಸೋಮವಾರಪೇಟೆ ಮೇ 18 : ಕರೊನಾ ಸೋಂಕು ವ್ಯಾಪಕವಾಗಿ ಹರಡುವ ಸಂದರ್ಭದಲ್ಲೇ ಸೇವಾ ಭಾರತೀಯ ಸ್ವಯಂ ಸೇವಕರು ಜೀವದ ಹಂಗು ತೊರೆದು ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರವನ್ನು ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ತಮ್ಮ ಸ್ವಂತ ಖರ್ಚಿನಲ್ಲಿ ವಾಹನಗಳಲ್ಲಿ ತೆರಳಿ, ಆಸ್ಪತ್ರೆಯಿಂದ ಕೊಡುವ ಪಿಪಿಎ ಕಿಟ್ ಧರಿಸಿ, ಮೃತರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದ್ದಾರೆ. ಯಾವುದೇ ಜಾತಿ ಧರ್ಮ ಎನ್ನದೆ ಮೃತ ಕುಟುಂಬದವರ ಅಭಿಪ್ರಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿ ಬರುತ್ತಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಿಂದು ಜಾಗರಣಾ ವೇದಿಕೆ ಹಾಗು ಭಾರತೀಯ ಜನತಾ ಪಕ್ಷದ ಸುಮಾರು 30 ಮಂದಿ ಕಾರ್ಯಕರ್ತರು ಸೇವಾಭಾರತೀಯ ಮೂಲಕ ಮಹಾತ್ಕಾರ್ಯದಲ್ಲಿ ತೊಡಗಿಸಿಕೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಅರೋಗ್ಯ ಇಲಾಖೆ ಹಾಗೂ ಪಂಚಾಯಿತಿ ಮಟ್ಟದಲ್ಲಿ ಶವಸಂಸ್ಕಾರಕ್ಕೆ ಸಿಬ್ಬಂದಿ ಕೊರೆತೆಯಿದ್ದು, ಇಂತಹ ಸಂದಿಗ್ದ ಸಮಯದಲ್ಲಿ ಸ್ವಯಂ ಸೇವಕರು ಪುಣ್ಯದ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಯಾವ ಮೂಲೆಯಿಂದ ಕರೊನಾ ಮೃತದೇಹ ಶವಸಂಸ್ಕಾರಕ್ಕೆ ಕರೆ ಮಾಡಿದರೂ ತಕ್ಷಣದಲ್ಲೇ ಸಿದ್ದರಾಗುತ್ತಾರೆ. ಪ್ರಸಕ್ತ ವರ್ಷ ಇಲ್ಲಿವರೆಗೆ 37 ಮೃತ ಶರೀರಕ್ಕೆ ಗೌರವ ವಿದಾಯ ಹೇಳಿದ್ದಾರೆ. ಕಳೆದ ವರ್ಷ 10 ಮೃತದೇಹಗಳಿಗೆ ಅಗ್ನಿಸ್ಪರ್ಶ ಮಾಡಿದ್ದರು.
ಯುವಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶ್ ತಿಮ್ಮಯ್ಯ ಮುಂದಾಳತ್ವದಲ್ಲಿ ಬಳಗುಂದ ಗ್ರಾಮದ ಸಂತೋಷ್, ಚೌಡ್ಲು ಉಮೇಶ್, ಹೊಸಳ್ಳಿ ಬೋಜೇಗೌಡ, ದೊಡ್ಡತೋಳೂರು ರಜೀತ್, ಕೊಡ್ಲಿಪೇಟೆಯ ದಿನೇಶ್, ದಯಾನಂದ, ತಾಕೇರಿ ಪ್ರವೀಣ್, ಸೋಮವಾರಪೇಟೆ ದರ್ಶನ್ ಜೋಯಪ್ಪ, ಚೌಡ್ಲು ಗ್ರಾಮದ ವೇಣು, ಸಂತೋಷ್, ಮನುಕುಮಾರ್ ರೈ, ಬ್ಯಾಡಗೊಟ್ಟ ಮೋಕ್ಷಿತ್‌ರಾಜ್, ನೀಲನ್, ಬಜೆಗುಂಡಿಯ ಶಶಿಕಾಂತ್, ಅರುಣ್, ಹೇಮಂತ್, ಹೇಮ್, ಹೆಗ್ಗಳ ಮೋಹನ್, ಶಾಂತಳ್ಳಿಯ ದಿವ್ಯ, ಗುರುಪ್ರಸಾದ್, ಕಿರಣ್, ನಂದೀಶ್, ಸಜೀನ್, ಬೇಳೂರು ಭಾಸ್ಕರ್, ಮಾದಾಪುರ ಸುನಿಲ್, ಶರಣು, ಹರೀಶ್, ಚೇತನ್, ಸಚಿನ್ ಇವರುಗಳು ಮಹಾನ್ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
::: ಅಭಿಪ್ರಾಯ :::
ಕರೊನಾ ಮಹಾಮಾರಿಯಿಂದ ದೇಶ ಸಂಕಷ್ಟದಲ್ಲಿದೆ. ಭಾರತಾಂಭೆಯ ಮಕ್ಕಳು ನಾವೆಲ್ಲರೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಶವಸಂಸ್ಕಾರ ಮಾಡುವುದು ಹಿಂದಿನ ಜನ್ಮದ ಪುಣ್ಯದ ಫಲ. ಈ ದೇಶದಲ್ಲಿ ಯಾರು ಅನಾಥರಲ್ಲ. ಈ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಮೃತ ದೇಹಕ್ಕೆ ಬೆಂಕಿಯಿಡಲು ಸಾಧ್ಯವಿಲ್ಲ. ನಾವು ನೊಂದ ಕುಟುಂಬಗಳ ಬಂಧುಗಳಾಗಿ ಆಗ್ನಿಸ್ಪರ್ಶ ಮಾಡಿದ ಸಂತೃಪ್ತಿ ಸಿಗುತ್ತದೆ. ಕೋವಿಡ್ ನಿಯಮಗಳನ್ನು ಪಾಲಿಸಿ, ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ಶವಸಂಸ್ಕಾರ ಮಾಡುತ್ತೇವೆ. ನಮ್ಮ ಕುಟಂಬಸ್ಥರು ನಮ್ಮನ್ನು ಹರಸಿದ್ದಾರೆ.
(ಮಹೇಶ್ ತಿಮ್ಮಯ್ಯ, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ)
ಕೋವಿಡ್‌ನಿಂದ ಮೃತರಾದವರ ಶವಸಂಸ್ಕಾರ ಮಾಡುವುದು ಸಮಾಜಸೇವೆ ಎಂದೇ ಭಾವಿಸಿದ್ದೇವೆ. ಜನರಿಗೆ ಕಷ್ಟದ ದಿನಗಳಲ್ಲಿ ಸಹಾಯ ಮಾಡುವುದರಿಂದ ನಮಗೂ ತೃಪ್ತಿಯಿದೆ. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತ ಉಂಟಾದ ಸಂದರ್ಭದಲ್ಲಿ ಸಂತ್ರಸ್ಥರ ರಕ್ಷಣೆ ಮಾಡುವ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದೇವೆ. ಸೇವಾಭಾರತಿ ಸಂಸ್ಥೆಯಿಂದ ಎಲ್ಲಾ ರೀತಿಯ ತರಬೇತಿ ಪಡೆದುಕೊಂಡು, ಕುಟುಂಬಸ್ಥರ ಪ್ರೋತ್ಸಾಹದಿಂದ ಸಂತೃಪ್ತಿಯ ಕೆಲಸ ಮಾಡುತ್ತಿದ್ದೇವೆ.
(ಉಮೇಶ್ ಚೌಡ್ಲು. ಹಿಂದು ಜಾಗರಣ ವೇದಿಕೆಯ ಸೋಮವಾರಪೇಟೆ, ತಾಲೂಕು ಅಧ್ಯಕ್ಷ)