ಕಾರ್ಣಿಕ ಶಕ್ತಿ ಸ್ವಾಮಿ ಕೊರಗಜ್ಜನ ಕುರಿತು…

01/06/2021

ಮಡಿಕೇರಿ ಜೂ.1 : ತುಳುನಾಡು ಹಲವು ದೈವಗಳ ನೆಲೆಬೀಡು, ಹತ್ತಾರು ದೈವಗಳಲ್ಲಿ ಸ್ವಾಮಿ ಕೊರಗಜ್ಜರಿಗೆ ಅಪಾರ ಶಕ್ತಿಯಿದೆ ಎನ್ನುವುದು ತುಳು ಜನರ ಅಪಾರ ನಂಬಿಕೆಯಾಗಿದೆ. ಕೊರಗಜ್ಜ ದೈವಕ್ಕೆ ಬಚ್ಚಿರೆ (ವೀಳ್ಯದೆಲೆ) ಹಾಗೂ ಚಕ್ಕುಲಿ ಭಕ್ತರು ನೀಡುವ ಶ್ರೇಷ್ಠ ಕಾಣಿಕೆಯಾಗಿದೆ.  ತುಳುನಾಡಿನ ಸ್ವಾಮಿ ಕೊರಗಜ್ಜ ಎಂದು ಯಾರೇ ಹೇಳಿದ್ರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರೆಂದೇ ಭಾವಿಸಿ ಬಿಡಬಹುದು. ಕೊಡಗು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಂಚರಿಸುವ ವಾಹನಗಳಲ್ಲೂ ಕೊರಗಜ್ಜನ ಹೆಸರು ಕಾಣಬಹುದು. ತನ್ನ ನೆಲೆಯಲ್ಲಿ ಯಾವುದೇ ಅಪಚಾರಗಳು ನಡೆದರೂ ತಕ್ಷಣ ಫಲ ತೋರಿಸುವ ಕೊರಗಜ್ಜನನ್ನು ಕಂಡರೆ ದಕ್ಷಿಣ ಕನ್ನಡದ ಮಂದಿಗೆ ಅತಿಯಾದ ಭಯ, ಭಕ್ತಿ.

ಯಾವುದಾದರೂ ವಸ್ತು ಕಳೆದುಹೋದರೆ ಭಕ್ತಿಯಿಂದ ಕೊರಗಜ್ಜನನ್ನು ಬೇಡಿದರೆ ಸಾಕು ಕಳೆದು ಹೋದ ವಸ್ತು ಸಿಕ್ಕಿ ಬಿಡುತ್ತದೆ. ಯಾವುದೇ ಒಳ್ಳೆಯ ಕಾರ್ಯವನ್ನು ಮಾಡುವಾಗ ಈ ದೈವವನ್ನು ನೆನೆದರೆ ಅದು ಈಡೇರುತ್ತದೆ ಎನ್ನುವ ನಂಬಿಕೆ ತುಳು ಜನರದ್ದು.

ಊರೂ, ಊರುಗಳಲ್ಲಿ ಕೊರಗಜ್ಜ ದೈವಕೋಲಗಳು ನಡೆಯುತ್ತವೆ. ಕೊಡಗು ಜಿಲ್ಲೆಯಲ್ಲೂ ಕೊರಗಜ್ಜನ ಭಕ್ತರಿದ್ದಾರೆ. ತುಳುವರಿಗೆ ಕೊರಗಜ್ಜ ಎಂದರೆ ಅದೊಂದು ಕಾರ್ಣಿಕ ಶಕ್ತಿ.

ಕೊರಗಜ್ಜನ ಮೂಲಸ್ಥಾನ ಮಂಗಳೂರು ಸಮೀಪದ ಕುತ್ತಾರು.

ಕೊರಗಜ್ಜನಿಗೆ ಮಾಡುವ ಅಗೇಲು ಹಾಗೂ ಕೋಲ ಸೇವೆ ನಡೆಯುವ ಸಮಯದಲ್ಲಿ ದೀಪ ಹಚ್ಚುವಂತಿಲ್ಲ, ಈ ಮಾರ್ಗದಲ್ಲಿ ಚಲಿಸುವ ಪ್ರತಿಯೊಬ್ಬರೂ ಲೈಟ್‌ ಡಿಮ್ ಮಾಡಿಕೊಳ್ಳುತ್ತಾರೆ. ಅಗೇಲು ಸೇವೆಯಲ್ಲಿ ಅಜ್ಜನಿಗೆ ಹುರಳಿ ಹಾಗೂ ಬಸಳೆ, ಮೀನಿನ ಸಾರು, ಕೋಳಿ, ಉಪ್ಪಿನ ಕಾಯಿಯನ್ನು ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ಕೊರಗಜ್ಜನ ಕಟ್ಟೆಯ ಬಳಿ ರಾತ್ರಿ 7 ಗಂಟೆ ನಂತರ ಮಹಿಳೆಯರಿಗೆ ಪ್ರವೇಶವಿಲ್ಲ.