ನೋಡಲಷ್ಟೇ ಇದು ಪುಟ್ಟ, ಶಕ್ತಿ ಮಾತ್ರ ಬೆಟ್ಟ : ಖಾರ ಖಾರ ಮೆಣಸಿನ ಕುರಿತು ಒಂದಷ್ಟು …

June 3, 2021

ಮಡಿಕೇರಿ ಜೂ.3 : (NEWS DESK) ಇದು ಪುಟ್ಟ ಮೆಣಸು, ಆದರೆ ಇದರ ಶಕ್ತಿ ಮಾತ್ರ ಬೆಟ್ಟದಷ್ಟು ದೊಡ್ಡದು. ಕೆಲವೇ ಕ್ಷಣಗಳಲ್ಲಿ ಕಣ್ಣೀರು ಬರಿಸುವಷ್ಟು ಶಕ್ತಿಶಾಲಿ ಈ ಮಲೆನಾಡ ತಳಿ. ಸಾಮಾನ್ಯವಾಗಿ ಇದನ್ನು ಗಾಂಧಾರಿ ಮೆಣಸು ಎಂದು ಕರೆಯುತ್ತಾರೆ.
ಮಲೆನಾಡು ಭಾಗದಲ್ಲಿ ಇದು ಹೆಚ್ಚಾಗಿ ಸಿಗುತ್ತದೆ. ಅನೇಕ ವರ್ಷಗಳ ಇತಿಹಾಸ ಈ ಮೆಣಸಿಗಿದ್ದರೂ ಬಹಳ ಹಿಂದೆ ಕೆಲವರು ಮಾತ್ರ ಇದನ್ನು ಆಹಾರದಲ್ಲಿ ಬಳಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದರ ಮಹತ್ವ ತಿಳಿದ ಹೆಚ್ಚಿನ ಮಂದಿ ಹೆಚ್ಚು ಹೆಚ್ಚು ಇದನ್ನು ಬಳಸುತ್ತಿರುವುದರಿಂದ ಬೇಡಿಕೆ ಕೂಡ ಹೆಚ್ಚಾಗಿದೆ. ಗಾಂಧಾರಿ ಮೆಣಸನ್ನು ಒಣಗಿಸಿ ಮಾರಾಟ ಮಾಡಿದರೆ 500 ರೂಪಾಯಿಯಿಂದ ಸಾವಿರ ರೂಪಾಯಿಯವರೆಗೆ ಬೆಲೆ ಬಾಳುತ್ತದೆ.
ಮಳೆ ಬೀಳುವ ಪ್ರದೇಶದಲ್ಲಿ ಹೆಚ್ಚಾಗಿ ಇಂದು ಕಂಡು ಬರುತ್ತದೆ. ತೀರ ಸಣ್ಣದು, ಮಧ್ಯಮ ಮತ್ತು ಸಲ್ಪ ದೊಡ್ಡ ಗಾತ್ರದ ಮೆಣಸುಗಳಿರುತ್ತವೆ. ಯಾವುದೇ ಗೊಬ್ಬರವಿಲ್ಲದೆ, ಕೃಷಿಕರ ಆರೈಕೆ ಇಲ್ಲದೆ ಕಾಫಿ, ಕಾಳು ಮೆಣಸು ಮತ್ತಿತರ ತೋಟಗಳಲ್ಲಿ ತಾನಾಗಿ ಬೆಳೆಯುತ್ತದೆ.
ಈ ಮೆಣಸನ್ನು ಜೀರಿಗೆ ಮೆಣಸು, ಗಾಂಧಾರಿ ಮೆಣಸು, ಸಣ್ಣ ಮೆಣಸು, ಕೊಡವ ಭಾಷೆಯಲ್ಲಿ ಉರಿಮಳು, ಪರಂಗಿಮಳು ಎಂದೆಲ್ಲ ಕರೆಯುತ್ತಾರೆ. ಅತ್ಯಂತ ಖಾರಭರಿತವಾದ ಪುಟ್ಟ ಮೆಣಸು ಆರೋಗ್ಯವರ್ಧಕವೂ ಆಗಿದೆ. ಹಸಿಮೆಣಸಿನ ಕಾಯಿ ಹೆಚ್ಚು ಬಳಸಿದರೆ ಗ್ಯಾಸ್ಟಿçಕ್ ಮತ್ತಿತರ ಉದರ ಸಂಬಂಧಿ ಕಾಯಿಲೆಗಳು ಚ್ಚಾಗುತ್ತದೆ ಎಂದು ಆತಂಕ ಪಡುವವರು ಪರ್ಯಾಯವಾಗಿ ಗಾಂಧಾರಿ ಮೆಣಸನ್ನು ಬಳಸುತ್ತಾರೆ.
ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಈಗಿನ ಹಸಿಮೆಣಸಿನ ಕಾಯಿಯಲ್ಲಿ ಖಾರವೇ ಇಲ್ಲ ಎಂದು ಮಹಿಳೆಯರು ಗೊಣಗಿಕೊಳ್ಳುವುದು ಸಾಮಾನ್ಯ. ಆದರೆ ಗಾಂಧಾರಿ ಮೆಣಸನ್ನು ಒಂದೆರಡು ಬಳಸಿದರೆ ಸಾಕು ನೀವು ಮಾಡುವ ಪಲ್ಯ, ಚಟ್ನಿ, ಜ್ಯೂಸ್ ಖಾರಭರಿತವಾಗಿ ನಾಲಿಗೆಗೆ ವಿಶೇಷವಾದ ರುಚಿಯನ್ನೂ ನೀಡುತ್ತದೆ. ಗ್ರಾಮೀಣ ಭಾಗದಲ್ಲಿ ಇದು ಹೆಚ್ಚಾಗಿ ಬೆಳೆಯುವುದರಿಂದ ಗ್ರಾಮಸ್ಥರಿಗೆ ಉಚಿತವಾಗಿಯೇ ದೊರೆಯುತ್ತದೆ. ಆದರೆ ನಗರ ಪ್ರದೇಶದ ಮಂದಿ ಮಾತ್ರ ಒಂದು ಕೆಜಿ ಗೆ ಸಾವಿರ ರೂಪಾಯಿಯನ್ನು ಕೂಡ ನೀಡಿ ಖರೀದಿಸುತ್ತಾರೆ. ಇದು ಆರೋಗ್ಯವರ್ಧಕ ಎನ್ನುವ ಕಾರಣಕ್ಕಾಗಿ ಇದಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ.
ಖಾರ ಖಾರ ಗಾಂಧಾರಿ ಮೆಣಸನ್ನು ಉಪ್ಪಿನಕಾಯಿ, ವೈನ್, ಎಲ್ಲಾ ಮಾಂಸಹಾರದ ಖಾದ್ಯಗಳು ಹಾಗೂ ಸಲಾಡ್ ಗಳಲ್ಲೂ ಬಳಸುತ್ತಾರೆ. ಈ ಮೆಣಸಿನೊಂದಿಗೆ ಹುಳಿ, ಕಹಿಹುಳಿ, ಕಿತ್ತಳೆ ಹಣ್ಣಿನ ಜೊತೆ ಚೂರು ಉಪ್ಪು ಬೆರೆಸಿ ಸೇವಿಸುವವರೂ ಇದ್ದಾರೆ. ಇದು ಅತ್ಯಂತ ರುಚಿಕರ ಮತ್ತು ಆರೋಗ್ಯವರ್ಧಕವೂ ಆಗಿದೆ.
ಸಣ್ಣ ಮೆಣಸಿನ ಸೊಪ್ಪನ್ನು ಬೇರೆ ಸೊಪ್ಪುಗಳೊಂದಿಗೆ ಬೆರೆಸಿ ಪಲ್ಯವನ್ನು ಕೂಡ ಮಾಡಬಹುದು. ಒಣಗಿದ ಗಾಂಧಾರಿ ಮೆಣಸನ್ನು ಬ್ಯಾಡಗಿ, ಗುಂಟೂರು ಮತ್ತು ಒಣಮೆಣಸಿನೊಂದಿಗೆ ಸೇರಿಸಿ ಪುಡಿ ಮಾಡಿ ಇಟ್ಟುಕೊಂಡರೆ ಸಾರಿಗೂ ಬಳಸಬಹುದು. ಸಾರು ಅಥವಾ ಸಾಂಬಾರ್ ಖಾರದೊಂದಿಗೆ ರುಚಿ ರುಚಿಯಾಗಿಯೂ ಇರುತ್ತದೆ.
::: ಬೆಳೆಸಲೂಬಹುದು ::::
ಮನೆಯಲ್ಲಿಯೇ ಈ ಪುಟ್ಟ ಮೆಣಸಿನ ಕಾಯಿಯ ಗಿಡವನ್ನು ಬೆಳೆಸಬಹುದು. ಒಣಗಿದ ಸಣ್ಣ ಮೆಣಸಿನ ಬೀಜವನ್ನು ಹೂವಿನ ಕುಂಡ ಅಥವಾ ಮಣ್ಣು, ಮರಳು ಮಿಶ್ರಿತ ಚೀಲಗಳಲ್ಲೂ ಹಾಕಿ ಅಭಿವೃದ್ಧಿ ಪಡಿಸಬಹುದು. ಈ ರೀತಿ ಬೆಳೆಯುವುದು ಕಷ್ಟ ಸಾಧ್ಯವಾದರೂ ಆಸಕ್ತಿಯಿಂದ ಪ್ರಯತ್ನವನ್ನು ಮುಂದುವರೆಸಿದರೆ ಫಲ ಸಿಗಬಹುದು.
ಸಾಮಾನ್ಯವಾಗಿ ಗ್ರಾಮೀಣ ಮನೆಗಳ ಸುತ್ತಮುತ್ತ ಹಾಗೂ ತೋಟಗಳಲ್ಲಿ ಪಕ್ಷಿಗಳು ತಿಂದು ಬೀಳಿಸಿದ ಬೀಜಗಳ ಮೂಲ ಜೀರಿಗೆ ಮೆಣಸಿನ ಸಸಿಗಳು ಬೆಳೆಯುತ್ತವೆ. ಮಾನವನ ಪ್ರಯತ್ನಗಳಿಗೆ ಮೀರಿ ಇದು ಪ್ರಕೃತಿ ನೀಡಿದ ಅಪರೂಪದ ಕೊಡುಗೆಯಾಗಿದೆ. ಇದನ್ನು ರುಚಿಗಾಗಿಯೂ ಬಳಸೋಣ, ಔಷಧಿಯಾಗಿಯೂ ಪರಿಗಣಿಸೋಣ. ಆದರೆ ಔಷಧಿಯನ್ನು ಔಷಧಿಯಂತೆಯೇ ಉಪಯೋಗಿಸಿದರೆ ದೇಹಕ್ಕೂ ಉತ್ತಮ.
ಜೀರಿಗೆ ಮೆಣಸು, ಗಾಂಧಾರಿ ಮೆಣಸು, ಸಣ್ಣ ಮೆಣಸು, ಉರಿಮಳು, ಪರಂಗಿಮಳು ಹೆಸರು ಏನೇ ಇರಲಿ, ಉತ್ತಮ ಗುಣಗಳನ್ನು ಹೊಂದಿರುವ ಈ ಪ್ರಕೃತಿಯ ಕೊಡುಗೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಕೃಷಿರಂಗ ಮನಸ್ಸು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಇದು ಆರ್ಥಿಕವಾಗಿಯೂ ಕೃಷಿಕರನ್ನು ಕೈಹಿಡಿದು ಮುನ್ನಡೆಸಬಹುದು. (((ಬರಹ : ಕೊಳ್ಳಿಮಾಡ ರಾಕಿ ಹಾಗೂ ಗ್ರೇಸಿ ದಮಯಂತಿ )))

error: Content is protected !!