ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವಿದ್ಯುತ್ ಗುತ್ತಿಗೆದಾರ ಸಾವು : ರೈತ ಸಂಘ ತೀವ್ರ ಅಸಮಾಧಾನ

June 7, 2021

ಮಡಿಕೇರಿ ಜೂ.7 : ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ
ಅರವತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಎಚ್.ಎಸ್ ಕಾಲೋನಿಯ ನಿವಾಸಿ ವಿದ್ಯುತ್ ಗುತ್ತಿಗೆದಾರ ರಂಗಸ್ವಾಮಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರೈತ ಸಂಘದ ಕೊಡಗು ಘಟಕ ಸಾವಿಗೆ ಕಾರಣವಾದ ಆನೆಯನ್ನು ತಕ್ಷಣ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.
ಮೃತರ ಅಂತಿಮ ದರ್ಶನ ಪಡೆದ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದರು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರಮುಖರು, ಕಾಡಾನೆ ವಿರುದ್ಧ ಕಾರ್ಯಾಚರಣೆ ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟಿಸಲು ಮುಂದಾದರು.
ಈ ಸಂದರ್ಭ ಸ್ಥಳದಲ್ಲಿದ್ದ ತಹಶೀಲ್ದಾರರು ಮಾತನಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಾಚರಣೆ ನಡೆಸಲು ಸಲಹೆ ನೀಡಿದರು.
ರಂಗಸ್ವಾಮಿ ಅವರ ಕುಟುಂಬ ವರ್ಗಕ್ಕೆ ಪರಿಹಾರವಾಗಿ ಮೊದಲ ಕಂತಿನಲ್ಲಿ ರೂ.2 ಲಕ್ಷದ ಚೆಕ್ ಹಾಗೂ ಅಂತ್ಯ ಸಂಸ್ಕಾರದ ಖರ್ಚಿಗೆಂದು ರೂ.15 ಸಾವಿರವನ್ನು ಅಧಿಕಾರಿಗಳು ಹಸ್ತಾಂತರಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಅಲೆಮಾಡ ಮಂಜುನಾಥ, ಪೊನ್ನಂಪೇಟೆ ಪಟ್ಟಣ ಸಂಚಾಲಕ ಚೊಟ್ಟೆಕಾಳಪಂಡ ಮನು, ಮಾಯಮುಡಿ ಸಂಚಾಲಕ ಪುಚ್ಚಿಮಾಡ ರಾಯ್ ಮುದ್ದಪ್ಪ, ಮತ್ತೂರು ರೈತ ಮುಖಂಡ ರವಿ ಹಾಗೂ ಗಿರೀಶ್, ಗ್ರಾಮದ ಪ್ರಮುಖರಾದ ಕಾಡ್ಯಮಾಡ ಜೀವನ್ ಮತ್ತಿತರರು ಹಾಜರಿದ್ದರು.

error: Content is protected !!