ದಾಸವಾಳ ರಸ್ತೆಯಲ್ಲಿ ತ್ಯಾಜ್ಯ ಸಂಗ್ರಹಣಾ ಘಟಕ ಸ್ಥಾಪನೆಗೆ ವಿರೋಧ

June 10, 2021

ಮಡಿಕೇರಿ ಜೂ.10 : ನಗರದ ದಾಸವಾಳ ರಸ್ತೆಯಲ್ಲಿ ಒಣತ್ಯಾಜ್ಯ ಸಂಗ್ರಹಣಾ ಘಟಕ ಸ್ಥಾಪನೆಗೆ ಸ್ಥಳೀಯ ನಗರಸಭಾ ಸದಸ್ಯ ಬಷೀರ್ ಅಹ್ಮದ್ ಹಾಗೂ ಇಲ್ಲಿನ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಸಭೆ ನಡೆಸಿದ ದಾಸವಾಳ ರಸ್ತೆ ನಿವಾಸಿಗಳು ಜನರ ಆರೋಗ್ಯದ ಹಿತದೃಷ್ಟಿಯಿಂದ ಕಸ ಸಂಗ್ರಹಣಾ ಘಟಕವನ್ನು ಇಲ್ಲಿ ನಿರ್ಮಿಸಬಾರದೆಂದು ಒತ್ತಾಯಿಸಿದರು.
ಸದಸ್ಯ ಬಷೀರ್ ಅಹ್ಮದ್ ಮಾತನಾಡಿ ಈ ಭಾಗದಲ್ಲಿ ಆಸ್ಪತ್ರೆ, ಪ್ರಜಾಪಿತ ಬ್ರಹ್ಮಕುಮಾರಿ ಪ್ರಾರ್ಥನಾ ಮಂದಿರ, ಅಂಗನವಾಡಿ, ಬಸಪ್ಪ ಶಿಶುವಿಹಾರ ಇರುವುದಲ್ಲದೆ ಸಾವಿರಾರು ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಅಲ್ಲದೆ ನಗರದ ಹೃದಯ ಭಾಗದಲ್ಲಿ ಈ ಯೋಜನೆಯನ್ನು ರೂಪಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲವೆಂದರು.
ಕಸ ಸಂಗ್ರಹಣಾ ಘಟಕ ನಿರ್ಮಾಣಗೊಂಡರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಲಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ನಗರಸಭಾ ಸದಸ್ಯರುಗಳಾದ ಅಮೀನ್ ಮೊಹಿಸಿನ್, ನೀಮಾ ಹರ್ಷದ್, ಬ್ರಹ್ಮಕುಮಾರಿಯ ಧನಲಕ್ಷ್ಮಿ, ಉಮಾ ಮಹೇಶ್ವರ್, ರಂಗನಾಥ್, ಗಣೇಶ್, ಸಚಿನ್, ನಿರಂಜನ್, ರಿಜ್ವಾನ್ ಮತ್ತಿತರರು ಹಾಜರಿದ್ದರು.

error: Content is protected !!