ವಿರಾಜಪೇಟೆ ಪೊಲೀಸರ ಹಲ್ಲೆಯಿಂದ ಮಗನ ಸಾವಾಗಿದೆ : ಎಸ್ ಪಿ ಎದುರು ರಾಯ್ ಡಿಸೋಜ ತಾಯಿಯ ಕಣ್ಣೀರು

June 12, 2021

ಮಡಿಕೇರಿ ಜೂ.12 : ಮಾನಸಿಕ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ವಿರಾಜಪೇಟೆ ಪಟ್ಟಣ ಠಾಣಾ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಆತ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ ಎನ್ನುವ ಆರೋಪದಡಿ ಪ್ರಕರಣ ದಾಖಲಾಗಿದೆ.
ವಿರಾಜಪೇಟೆಯ ರಾಯ್ ಡಿಸೋಜ(50) ಎಂಬುವವರೇ ಮೃತಪಟ್ಟ ವ್ಯಕ್ತಿಯಾಗಿದ್ದು, ಪೊಲೀಸರ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಹೋದರ ರಾಬಿನ್ ಡಿಸೋಜಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿರಾಜಪೇಟೆ ಪಟ್ಟಣ ನಿವಾಸಿ ರಾಯ್ ಡಿಸೋಜ ಹಲವು ಸಮಯದಿಂದ ಮಾನಸಿಕ ಅಸ್ವಸ್ಥತೆ ಮತ್ತು ಮೂರ್ಛೆ ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಜೂ.9ರ ರಾತ್ರಿ ತಾಯಿಗೆ ತಿಳಿಯದಂತೆ ಮನೆಯಿಂದ ಹೊರ ಹೋದ ರಾಯ್ ಡಿಸೋಜ ರಸ್ತೆಯಲ್ಲಿ ಕತ್ತಿ ಹಿಡಿದು ತಿರುಗಾಡುತ್ತಿದ್ದರು ಎಂದು ಹೇಳಲಾಗಿದೆ.
ಈ ಸಂದರ್ಭ ಸ್ಥಳಕ್ಕೆ ಬಂದ ಬೀಟ್ ಪೊಲೀಸರ ಮೇಲೆ ರಾಯ್ ಡೇವಿಡ್ ಕತ್ತಿ ಬೀಸಿದ್ದು, ಪೊಲೀಸ್ ಪೇದೆಯೊಬ್ಬರ ಕೈಗೆ ಗಾಯವಾಗಿದೆ ಎಂದು ಆರೋಪಿಸಲಾಗಿದೆ.
ಪೊಲೀಸರು ರಾಯ್ ಡಿಸೋಜ ಅವರನ್ನು ಠಾಣೆಗೆ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಬಳಿಕ ಪೊಲೀಸರು ರಾಯ್ ಡಿಸೋಜ ಅವರ ಮನೆಗೆ ತೆರಳಿ ಅವರ ತಾಯಿ ಮೆಟೆಲ್ಡಾ ಲೋಬೊ ಅವರನ್ನು ಠಾಣೆಗೆ ಕರೆಯಿಸಿ ಮಗನನ್ನು ಮನೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ನಂತರ ಮನೆಗೆ ಬಂದು ರಾಯ್ ಡಿಸೋಜ ಅವರ ದೇಹವನ್ನು ಪರಿಶೀಲಿಸಿದ ಸಂದರ್ಭ ದೇಹದಲ್ಲಿ ಗಾಯದ ಗುರುತುಗಳು ಕಂಡು ಬಂದಿದೆ. ಜೂ.10ರಂದು ವಿರಾಜಪೇಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಸಂದರ್ಭ ವೈದ್ಯರು ಪರಿಶೀಲನೆ ನಡೆಸಿ ತಕ್ಷಣವೇ ಗಾಯಾಳುವನ್ನು ಮಡಿಕೇರಿ ಆಸ್ಪತ್ರೆಗೆ ಸ್ಥಳಾಂತರಿಸುವ0ತೆ ಸೂಚಿಸಿದ್ದರು. ಅದರಂತೆ ರಾಯ್ ಡಿಸೋಜ ಅವರನ್ನು ನಗರದ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಂದರ್ಭ ಆಸ್ಪತ್ರೆಗೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಗನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸುವಂತೆ ಮೆಟೆಲ್ಡಾ ಲೋಬೊ ಅವರಿಗೆ ಒತ್ತಡ ಹೇರಿದ್ದಲ್ಲದೇ, ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಜೂ.12ರ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ರಾಯ್ ಡೇವಿಡ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
::: ತೀವ್ರ ಅಸಮಾಧಾನ :::
ಮಾನಸಿಕ ರೋಗಿಯನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ ಪೊಲೀಸರು ರಾಯ್ ಸಾವಿಗೆ ಕಾರಣಕರ್ತರಾಗಿದ್ದಾರೆ ಎಂದು ಕ್ರೈಸ್ತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿದ ಕ್ರೈಸ್ತ ಸಮಾಜದ ಪ್ರಮುಖರಾದ ಎಸ್.ಎಂ.ಡಿಸಿಲ್ವಾ, ಕೆ.ಟಿ. ಬೇಬಿ ಮ್ಯಾಥ್ಯು ಹಾಗೂ ಜಾನ್ಸನ್ ಪಿಂಟೋ ಅವರುಗಳು ಪೊಲೀಸರು ಮಾನಸಿಕ ರೋಗಿಯ ವಿರುದ್ಧ ಗೂಂಡಾ ವರ್ತನೆ ಮಾಡಿದ್ದು, ತಕ್ಷಣ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ತಪ್ಪಿತಸ್ಥ ಪೊಲೀಸರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
::: ದೂರು ನೀಡಿದ ತಾಯಿ :::
ಮೃತರ ತಾಯಿ ಹಾಗೂ ಸಹೋದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಮೃತರ ತಾಯಿ ಮೆಟೆಲ್ಡಾ ಲೋಬೊ ಅವರು ಮಗ ಮನೆಯಿಂದ ಹೊರ ಹೋದ ವಿಚಾರ ನನಗೆ ತಿಳಿದಿರಲಿಲ್ಲ. ರಾತ್ರಿ ಮಗ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಎಲ್ಲಾ ಕಡೆ ವಿಚಾರಿಸಿದ್ದರೂ ಆತ ಪತ್ತೆಯಾಗಿರಲಿಲ್ಲ. ತಡ ರಾತ್ರಿ ಪೊಲೀಸರು ಮನೆಗೆ ಬಂದು ಮಗನನ್ನು ಠಾಣೆಯಿಂದ ಕರೆದೊಯ್ಯಬೇಕು ಎಂದು ತಾಖೀತು ಮಾಡಿದರು.
ಮನೆಗೆ ಕರೆತಂದು ಆತನ ದೇಹ ಪರಿಶೀಲಿಸಿದಾಗ ಗಾಯಗಳಾಗಿತ್ತು. ವಿರಾಜಪೇಟೆ ವೈದ್ಯರು ಸೂಚನೆಯಂತೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದು, ಜೂ.12ರಂದು ಮೃತಪಟ್ಟಿದ್ದಾನೆ. ಮಾನಸಿಕ ಅಸ್ವಸ್ಥನಿಗೆ ಮನ ಬಂದತೆ ಥಳಿಸಿ ಆತನ ಸಾವಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಳಲು ತೋಡಿಕೊಂಡರು.
ಮೃತರ ಸಹೋದರ ರಾಬಿನ್ ಡಿಸೋಜಾ ಮಾತನಾಡಿ ಸಹೋದರನ ಸಾವಿನ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಮೃತ ದೇಹವನ್ನು ಸ್ಕ್ಯಾನಿಂಗ್ ಮಾಡಬೇಕು. ಮರಣೋತ್ತರ ಪರೀಕ್ಷೆಯ ಸಂದರ್ಭ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ಆಗ್ರಹಿಸಿದರು. ಸ್ಥಳೀಯ ವೈದ್ಯರಲ್ಲದೇ, ಬೇರೆ ಆಸ್ಪತ್ರೆಯಿಂದ ವೈದ್ಯರನ್ನು ಕರೆಯಿಸಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
::: ತನಿಖೆ ಬಳಿಕ ಕ್ರಮ :::
ಈ ಸಾವಿನ ಪ್ರಕರಣದ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಮೃತರ ಸಹೋದರ ದೂರು ನೀಡಿದ್ದಾರೆ. ಕಾನೂನು ಪ್ರಕಾರವೇ ತನಿಖೆ ನಡೆಯಲಿದೆ. ಆತ ಮಾನಸಿಕ ಕಾಯಿಲೆ ಇಂದ ಬಳಲುತ್ತಿರುವ ವಿಚಾರದ ಬಗ್ಗೆಯೂ ತನಿಖೆ ನಡೆಯಲಿದೆ. ತನಿಖೆಯ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

error: Content is protected !!