ಕೊಡವರ ಕುಲಶಾಸ್ತ್ರೀಯ ಅಧ್ಯಯನದಲ್ಲಿ ನ್ಯೂನತೆ : ಕೋರ್ಟ್ ಮೆಟ್ಟಿಲೇರಿದ CNC

June 12, 2021

ಮಡಿಕೇರಿ ಜೂ.12 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೊಡವರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕೆಂದು ಹಲವು ಬಾರಿ ಮನವಿಗಳನ್ನು ಮಾಡುತ್ತಾ ಬಂದಿದೆ. ಇದನ್ನು ಪುರಸ್ಕರಿಸಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ಇಲ್ಲಿಗೆ ಎಸ್.ಟಿ. ಪಟ್ಟಿಗೆ ಸೇರಿಸುವ ಸಲುವಾಗಿ ಕೊಡವರ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರ್ಕಾರಗಳು ಆದೇಶಿಸಿದ್ದವು. ಆದರೆ ಸಂಸ್ಥೆಯಲ್ಲಿ ನಿರ್ದೇಶಕರಾಗಿರುವ ಟಿ.ಟಿ.ಬಸವನಗೌಡ ರವರು ಕೊಡವರ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸದೆ ಸಾಮಾಜಿಕ, ಆರ್ಥಿಕ ಅಧ್ಯಯನ ನಡೆಸಿದ್ದಾರೆ ಎಂದು ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.

ಈ ಹಿಂದೆ ಹಲವು ಸಮುದಾಯಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಸಿರುತ್ತಾರೆ. ಆದರೆ ಎಲ್ಲವನ್ನು ನಕಾರಾತ್ಮಕವಾಗಿ ವರದಿಗಳನ್ನು ಸರ್ಕಾರಕ್ಕೆ ನೀಡಿರುತ್ತಾರೆ. ಇವರು ತಾರತಮ್ಯದ ಅಧ್ಯಯನದ ಕುರಿತು ನಾವು ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ.

ಇದೇ ಕಾರಣಕ್ಕೆ ನ್ಯಾಯ ಕೋರಿ ಕೋರ್ಟ್ ಮೆಟ್ಟಿಲೇರಿರುವುದಾಗಿ ನಾಚಪ್ಪ ತಿಳಿಸಿದ್ದು, ಈ ರೀತಿ ಮಾಹಿತಿ ನೀಡಿದ್ದಾರೆ.

ಲಕ್ಕವಳ್ಳಿ ಎಸ್. ಮಂಜುನಾಥ್ ವಕೀಲರ ಮೂಲಕ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿದೆ. ರಿಟ್ ಪಿಟೀಶನ್ ಸಂಖ್ಯೆ : 7003/2021. ಈ ದಾವೆಯ ಕುರಿತು ದಿನಾಂಕ :09-06-2021 ರಂದು ಎ.ಎಸ್. ಪೊನ್ನಣ್ಣ, ಹಿರಿಯ ವಕೀಲರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಆಡಿಷನಲ್ ಅಡ್ವಾಕೆಟ್ ಜನರಲ್. ರವರು ಅರ್ಜಿದಾರರ ಪರವಾಗಿ ವಾದ ಮಂಡಿಸಿದರು. ವಾದದಲ್ಲಿ ಕೊಡವರ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸದೆ ಸಾಮಾಜಿಕ, ಆರ್ಥಿಕತೆ ಕುರಿತು ವರದಿ ತಯಾರಿಸುತ್ತಿದ್ದಾರೆ. ಈ ಹಿಂದೆಯು ಉದ್ದೇಶಪೂರ್ವಕ ತಾರತಮ್ಯದ ಕರ್ತವ್ಯಲೋಪದಿಂದ ಕೂಡಿದ ವರದಿಗಳನ್ನು ನೀಡಿರುತ್ತಾರೆ. ಆದ್ದರಿಂದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಟಿ.ಟಿ. ಬಸವನಾಗೌಡ ರವರನ್ನು ನಿರ್ದೇಶಕರ ಸ್ಥಾನದಿಂದ ಬದಲಾಯಿಸಿ, ಸರ್ಕಾರದ ಬೇರೊಬ್ಬ ಅಧಿಕಾರಿಯನ್ನು ನೇಮಿಸಿ ಹೊಸ ಅಧಿಕಾರಿಗಳಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ಹೈಕೋರ್ಟ್ ನ ಮುಖ್ಯ ನ್ಯಾಯದೀಶರು ಪ್ರತಿವಾದಿಗೆ ತುರ್ತು ನೋಟೀಸ್ ಜಾರಿ ಮಾಡಿ ಮತ್ತು ಮುಂದಿನ ವಿಚಾರಣೆಯನ್ನು ದಿನಾಂಕ :20-07-2021 ಕ್ಕೆ ನಿಗಧಿ ಪಡಿಸಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ವಿಷಯವು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಬಾಕಿ ಇರುವ ಕಾರಣ ಈ ಸಂದರ್ಭದಲ್ಲಿ ನಿರ್ದೇಶಕರು ಟಿ.ಟಿ. ಬಸವನಗೌಡ ರವರು ಮುಂದುವರೆದು ಯಾವುದೇ ಕುಲಶಾಸ್ತ್ರೀಯ ಅಧ್ಯಯನ ನಡೆಸದಂತೆ ಹಾಗೂ ವರದಿ ನೀಡದಂತೆ ತಡೆಹಿಡಿಯಲು ರಾಜ್ಯ ಸರ್ಕಾರ ಸೂಕ್ತ ಆದೇಶ ನೀಡಬೇಕೆಂದು ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ

error: Content is protected !!