ಕೊಡಗು : ಗೌರವಧನ ವಂಚಿತ ಗ್ರಾ.ಪಂ ನೌಕರರಿಂದ ಪ್ರತಿಭಟನೆ

June 17, 2021

ಮಡಿಕೇರಿ ಜೂ.17 : ಕೋವಿಡ್ ಸೈನಿಕರಾಗಿ ದುಡಿಯುತ್ತಿರುವ ಗ್ರಾಮ ಪಂಚಾಯ್ತಿ ನೌಕರರಿಗೆ ಕಳೆದ ಕೆಲವು ತಿಂಗಳುಗಳಿಂದ ಸಮರ್ಪಕವಾಗಿ ಗೌರವಧನ ನೀಡುತ್ತಿಲ್ಲವೆಂದು ಆರೋಪಿಸಿ ಮತ್ತು ತಕ್ಷಣ ವೇತನ ಪಾವತಿಸುವಂತೆ ಒತ್ತಾಯಿಸಿ ಕೊಡಗಿನ ವಿವಿಧ ಗ್ರಾ.ಪಂ ನೌಕರರು ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.
ಕೊಡಗು ಜಿಲ್ಲೆಯಲ್ಲಿ 104 ಗ್ರಾಮ ಪಂಚಾಯ್ತಿಗಳಿದ್ದು, ಅವುಗಳ ಪೈಕಿ 27 ಗ್ರಾಮ ಪಂಚಾಯ್ತಿಗಳ ನೂರಾರು ನೌಕರರಿಗೆ ಏಳು ತಿಂಗಳಿನ ಗೌರವಧನವೇ ಸಿಕ್ಕಿಲ್ಲ. ಒಂದೆಡೆ ಲಾಕ್ ಡೌನ್ ಆಗಿದ್ದು, ಬೇರೆ ಕೆಲಸಗಳು ಸಿಗುತ್ತಿಲ್ಲ. ಹೀಗಾಗಿ ಪಂಚಾಯಿತಿಯಿಂದ ಸಿಗುವ ಗೌರವಧನವನ್ನು ನಂಬಿಕೊAಡು ಸಂಸಾರ ಸಾಗಿಸುತ್ತಿದ್ದ ನೂರಾರು ಕುಟುಂಬಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕೊಡಗು ಜಿಲ್ಲಾ ಗ್ರಾಮ ಪಂಚಾಯ್ತಿ ನೌಕರರ ಸಂಘದ ಮುಖಂಡ ಪಿ.ಆರ್.ಭರತ್ ಆರೋಪಿಸಿದರು.
ವಿಪರ್ಯಾಸವೆಂದರೆ ಏಳೆಂಟು ತಿಂಗಳಿನಿಂದ ಗೌರವಧನವನ್ನು ನೀಡದಿದ್ದರೂ ಪಂಚಾಯ್ತಿ ಪಿಡಿಓಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪಂಚಾಯ್ತಿ ನೌಕರರನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡುತ್ತಿದ್ದಾರೆ. ತಮ್ಮ ಪಂಚಾಯಿತಿಗಳಿಂದ ಸಾಕಷ್ಟು ದೂರದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗಳಿಗೆ ಹೋಗಿ ಬರುವುದಕ್ಕೆ ಕನಿಷ್ಠ ಬಸ್ ಚಾರ್ಜ್ಗೂ ಬೇರೆಯವರಿಂದ ಸಾಲ ಮಾಡಿ ಹೋಗಿ ಬರಬೇಕಾದ ಸ್ಥಿತಿ ಇದೆ. ಜೊತೆಗೆ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲೂ ಯಾವುದೇ ಕೊವಿಡ್ ಪಾಸಿಟಿವ್ ಪ್ರಕರಣ ಆದರೂ, ಆ ಮನೆಯನ್ನು ಸೀಲ್‌ಡೌನ್ ಮಾಡಲು, ಅಲ್ಲಿ ಔಷಧ ಸಿಂಪಡಿಸಲು ಮತ್ತು ಸೀಲ್ ಡೌನ್ ಮನೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪಂಚಾಯಿತಿ ನೌಕರರೇ ಕೊವಿಡ್ ವಾರಿಯರ್ಸ್ ಗಳಾಗಿ ದುಡಿಯುತ್ತಿದ್ದಾರೆ. ಆದರೂ ಪಂಚಾಯಿತಿಗಳಲ್ಲಿ ಮಾತ್ರ ಅನುದಾನಗಳ ಕೊರತೆಯ ನೆಪವೊಡ್ಡಿ ತಮ್ಮ ನೌಕರರಿಗೆ ಗೌರವಧನವನ್ನೇ ಕೊಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ವಿರಾಜಪೇಟೆ ತಾಲ್ಲೂಕಿನ ನಾಲ್ಕೇರಿ ಗ್ರಾಮ ಪಂಚಾಯ್ತಿ, ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾ.ಪಂ, ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮ ಪಂಚಾಯ್ತಿ ಸೇರಿದಂತೆ 27 ಪಂಚಾಯಿತಿಗಳಲ್ಲಿ ನೌಕರರಿಗೆ ಗೌರವಧನ ನೀಡಿಲ್ಲವೆಂದು ಭರತ್ ಆರೋಪಿಸಿದರು.
ತಕ್ಷಣ ರಾಜ್ಯ ಸರಕಾರ ಕೋವಿಡ್ ವಾರಿಯರ್‌ಗಳಿಗೆ ವೇತನ ಬಿಡುಗಡೆ ಮಾಡಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.

error: Content is protected !!