ಐಟಿಐ ಅತಿಥಿ ಬೋಧಕರ ಹುದ್ದೆ ಖಾಯಂಗೊಳಿಸಲು ಒತ್ತಾಯ

June 20, 2021

ಮಡಿಕೇರಿ ಜೂ.20 : ಐಟಿಐ ಅತಿಥಿ ಬೋಧಕರ ಶೋಚನೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನ್ಯಾಯಯುತವಾದ ಕೋವಿಡ್ ಸಂಭಾವನೆಯನ್ನು ಕೊಡುವುದರೊಂದಿಗೆ, ಅವರನ್ನು ಖಾಯಂಗೊಳಿಸಬೇಕೆಂದು ಮೈಸೂರ್ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ನಂಜರಾಜ ಅರಸ್ ಆಗ್ರಹಿಸಿದ್ದಾರೆ.
ಸರಕಾರಿ ಐಟಿಐ ಅತಿಥಿ ಬೋಧಕರ ಹೋರಾಟ ಸಮಿತಿಯಿಂದ ಆಯೋಜಿತ ಫೇಸ್ ಬುಕ್ ಆನ್ ಲೈನ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಸ್ವಯಂ ಉದ್ಯೋಗಕ್ಕೆ ತೊಡಗಿಸುವ ಕಾರ್ಯದಲ್ಲಿ ನಿರತರಾಗಿರುವ ಐಟಿಐ ಅತಿಥಿ ಬೋಧಕರ ಇಂದಿನ ಪರಿಸ್ಥಿತಿ ಶೋಚನೀಯವಾಗಿದೆ. ಆತ್ಮ ನಿರ್ಭರ್, ಮೇಕ್ ಇನ್ ಇಂಡಿಯಾ , ಸ್ಕಿಲ್ ಇಂಡಿಯಾ ಯೋಜನೆಗಳನ್ನು ರೂಪಿಸುವ ಪ್ರಧಾನಿಗಳು ಅತಿಥಿ ಬೋಧಕರ ಸಂಕಷ್ಟ ನಿವಾರಣೆಗೆ ಮುಂದಾಗಬೇಕೆಂದು ಮನವಿ ಮಾಡಿ, ಹೋರಾಟಕ್ಕೆ ಬೆಂಬಲ ಸ್ರಚಿಸಿದರು.
ಎಐಡಿವೈಒ ಸಂಘಟನೆಯ ರಾಜ್ಯ ಅಧ್ಯಕ್ಷರು ಹಾಗೂ ಸರ್ಕಾರಿ ಅತಿಥಿ ಬೋಧಕರ ರಾಜ್ಯ ಸಂಯೋಜಕರಾದ ಎಂ. ಉಮಾದೇವಿ ಮಾತನಾಡಿ, ಐಟಿಐ ಅತಿಥಿ ಬೋಧಕರು ಗಂಟೆಗೆ ನೂರು ರೂಪಾಯಿಯಂತೆ ದುಡಿಯುತ್ತಿದ್ದು, ಅವರಿಗೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಯಾವುದೇ ರೀತಿಯ ಸಂಭಾವನೆ ಪಾವತಿ ಆಗುತ್ತಿಲ್ಲ. ಇವರ ಸಂಕಷ್ಟ ಮನಗಂಡು ಸರ್ಕಾರವು ಅವರಿಗೆ ಸೇವಾ ಭದ್ರತೆಯನ್ನು ಒದಗಿಸಿ, ಸಂಭಾವನೆ ಹೆಚ್ಚಿಸಬೇಕೆಂದರು.
ಬೆAಗಳೂರಿನ ಇಂಜಿನಿಯರಿಂಗ್ ಫ್ಯಾಕಲ್ಟಿ ಫೋರಂ ಸಲಹೆಗಾರರಾದ ವಿ.ಎನ್.ರಾಜಶೇಖರ್ ಮಾತನಾಡಿ, ಐಟಿಐ ಅತಿಥಿ ಬೋಧಕರಿಗೆ ಕೆಲಸಕ್ಕೆ ತಕ್ಕಂತೆ ಸಂಬಳ ನೀಡುತ್ತಿಲ್ಲ. ಬದಲಾಗಿ ಜೀತದಾಳಿನಂತೆ ದುಡಿಸಿಕೊಳ್ಳುತ್ತಿದ್ದಾರೆ. ಕನಿಷ್ಠ ವೇತನವನ್ನು 18ರಿಂದ 20ಸಾವಿರ ರೂಪಾಯಿಯಂತೆ ಕೊಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಐಟಿಐ ಅತಿಥಿಬೋಧಕರ ಹೋರಾಟ ಸಮಿತಿಯ ಅಧ್ಯಕ್ಷರಾದ ನಾಗವೇಣಿ, ಈಗಿರುವ ಅತಿಥಿ ಬೋಧಕರನ್ನು ಮಾನವೀಯತೆಯ ಆಧಾರದ ಮೇಲೆ ಒಳ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಅತಿಥಿ ಬೋಧಕರಾದ ಪದ್ಮಲತಾ, ಪ್ರಭು ನಾವಿ, ಸಾಧಿಕ್, ಅಮರೇಶ್, ಸರ್ಕಾರಿ ಅತಿಥಿ ಬೋಧಕರ ಹೋರಾಟ ಸಮಿತಿ ಜಂಟಿ ಕಾರ್ಯದರ್ಶಿ ರಾಕೇಶ್ ರಾಜೀವ್ ಮಾತನಾಡಿದರು. ಅನಿತಾ ವಂದಿಸಿದರು.

error: Content is protected !!