ಕುಶಾಲನಗರ ಮಣಜೂರು ವೃದ್ಧೆ ಕೊಲೆ ಪ್ರಕರಣ : ಮೊಮ್ಮಗನೇ ಆರೋಪಿ

July 11, 2021

ಮಡಿಕೇರಿ ಜು.11 : ಕುಶಾಲನಗರದ ಮಣಜೂರು ಗ್ರಾಮದಲ್ಲಿ ನಡೆದಿದ್ದ ವೃದ್ಧೆ ಗೌರಮ್ಮರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವೃದ್ಧೆಯ ಮೊಮ್ಮಗ ಲೋಡರ್ ವೃತ್ತಿಯ ಕೆ.ಎಸ್.ಮಂಜುನಾಥ ಬಂಧಿತ ಆರೋಪಿಯಾಗಿದ್ದಾನೆ. ಇದೇ ಜು.3 ರಂದು ಗೌರಮ್ಮರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ತನಿಖೆ ಕೈಗೊಂಡ ಕುಶಾಲನಗರ ಗ್ರಾಮಾಂತರ ಪೊಲೀಸರು ವೃದ್ಧೆಯ ಸಂಬಂಧಿಕರನ್ನು ವಿಚಾರಣೆಗೊಳಪಡಿಸಿದರು. ಮಂಜುನಾಥನ ಬಗ್ಗೆ ಸಂಶಯಗೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಕರಣದ ರಹಸ್ಯ ಬಯಲಾಗಿದೆ. ಚಿನ್ನಾಭರಣ, ಹಣ ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರ ಕಲಹ ಏರ್ಪಟ್ಟು ಕೊಲೆ ನಡೆದಿದೆ ಎಂದು ಹೇಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ ವಿಭಾಗದ ಉಪಅಧೀಕ್ಷಕ ಹೆಚ್.ಎಂ.ಶೈಲೇಂದ್ರ ಮಾರ್ಗದರ್ಶನದಲ್ಲಿ ಕುಶಾಲನಗರದ ಸಿಪಿಐ ಎಂ.ಮಹೇಶ್, ಪಿಎಸ್‌ಐ ಶಿವಶಂಕರ, ಎಎಸ್‌ಐ ಗೋಪಾಲ, ಸಿಬ್ಬಂದಿಗಳಾದ ಸಜಿ, ಶ್ರೀನಿವಾಸ್, ಮಂಜುನಾಥ, ಶನಂತ, ಪ್ರಿಯಕುಮಾರ್, ಸುದೀಶ್ ಕುಮಾರ್, ರಂಜಿತ್, ಲೋಕೇಶ್, ಪ್ರಕಾಶ್, ಟೆಕ್ನಿಕಲ್ ಸೆಲ್‌ನ ರಾಜೇಶ್, ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣವನ್ನು ಭೇದಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿರುವ ಎಸ್‌ಪಿ ಕ್ಷಮಾಮಿಶ್ರ ನಗದು ಬಹುಮಾನ ಘೋಷಿಸಿದ್ದಾರೆ.

error: Content is protected !!