ಮಕ್ಕಳ ದತ್ತು ಪ್ರಕ್ರಿಯೆ : ಹಣ ಲಪಟಾಯಿಸುವ ಜಾಲವಿದೆ : ಎಚ್ಚರ ವಹಿಸಲು ಕೊಡಗು ಪೊಲೀಸರ ಮನವಿ

July 16, 2021

ಮಡಿಕೇರಿ ಜು.16 : ಮಕ್ಕಳ ದತ್ತು ಪ್ರಕ್ರಿಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಹಾದಿ ತಪ್ಪಿಸಿ ಹಣ ಲಪಟಾಯಿಸುವ ಯತ್ನಗಳು ನಡೆಯುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ಮನವಿ ಮಾಡಿದೆ.
ಕೊವಿಡ್-19 ನಿಂದ ಪೋಷಕರು ಮೃತಪಟ್ಟು ಅನಾಥರಾದ ಮಕ್ಕಳನ್ನು ದತ್ತು ಪ್ರಕ್ರಿಯೆ ಹಾದಿಯಲ್ಲಿ ನೀಡುವ ಬಗ್ಗೆ ತಪ್ಪು ಮಾಹಿತಿಯನ್ನು ಹರಿಬಿಟ್ಟು ಹಣವನ್ನು ಸಂಗ್ರಹಿಸುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ವ್ಯಕ್ತಿಗಳ ವಿರುದ್ಧ ಸೈಬರ್ ಕ್ರೈಂ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರಲ್ಲಿ ಒಂದು ವಿನಂತಿ, ಮಕ್ಕಳನ್ನು ಪಡೆಯಲು ಬಯಸುವವರು ಮಕ್ಕಳ ದತ್ತು ಪ್ರಕ್ರಿಯೆ ಬಗ್ಗೆ ಕಾನೂನಾತ್ಮಕವಾಗಿ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸರ್ಕಾರ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಕೊಡಗು ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕ, ಇಲ್ಲಿ ಕೂಡ ಬಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಮಕ್ಕಳ ರಕ್ಷಣಾ ಘಟಕ ಕಚೇರಿ ದೂರವಾಣಿ ಸಂಖ್ಯೆ 08272-228800.
ಮಕ್ಕಳನ್ನು ಕಾನೂನಾತ್ಮಕವಾಗಿ ದತ್ತು ಪ್ರಕ್ರಿಯೆ ಅಡಿಯಲ್ಲಿ ಪಡೆದುಕೊಳ್ಳದೆ ಅಕ್ರಮವಾಗಿ ಮಕ್ಕಳನ್ನು ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಅಂತಹ ಮಕ್ಕಳನ್ನು ರಕ್ಷಣೆ ಮಾಡಿ ಪುನರ್ವಸತಿ ನೀಡಲಾಗುವುದು ಹಾಗೂ ಅಂತಹವರ ವಿರುದ್ಧ ಕಲಂ: 80, 81 ಜೆ.ಜೆ. ಆಕ್ಟ್ 2015 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ತಪ್ಪಿತಸ್ಥರಿಗೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು 1 ಲಕ್ಷ ದಂಡ ಶಿಕ್ಷೆ ಇದೆ.
ಹಾಗೆಯೆ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ, ನೊಂದ ಮಕ್ಕಳ ಗುರುತರ ಮಾಹಿತಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ, ಪತ್ರಿಕೆಗಳಲ್ಲಿ, ಮಾದ್ಯಮಗಳಲ್ಲಿ ಹರಿಬಿಟ್ಟ ವ್ಯಕ್ತಿಗಳ ಮೇಲೆ ಕಲಂ: 74 ಜೆ.ಜೆ. ಆಕ್ಟ್ 2015 ರ ಅಡಿಯಲ್ಲಿ ಹಾಗೂ ಪೊಕ್ಸೊ ಕಲಂ 23 ಆಕ್ಟ್ 2012 ರ ಅಡಿಯಲ್ಲಿ ಕೂಡ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರಿಗೆ 6 ತಿಂಗಳ ಶಿಕ್ಷೆ ಮತ್ತು 1 ರಿಂದ 2 ಲಕ್ಷದವರೆಗೆ ದಂಡ ಶಿಕ್ಷೆ ಇರುವುದಾಗಿದೆ.
ಆದ್ದರಿಂದ ಪ್ರತಿಯೊಬ್ಬ ಸಾರ್ವಜನಿಕರು, ರಕ್ಷಾಣಾಧಿಕಾರಿಗಳು, ಪೋಷಕ ವೃಂದದವರು, ಶಾಲಾ ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಇತರೆ ಇಲಾಖೆಯ ಮುಖ್ಯಸ್ಥರು , ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು, ಮಕ್ಕಳ ಸಂಬಂಧ ಕಾಳಜಿ ವಹಿಸಿ ಅವರ ಕಡೆ ಗಮನಹರಿಸುವುದು. ಅಲ್ಲದೆ ಈ ರೀತಿ ಯಾರೇ ಆಗಲಿ ಹಣ ಮಾಡುವ ಉದ್ದೇಶದಿಂದ ಅನಾಥ ಮಕ್ಕಳ ದತ್ತು ಪ್ರಕ್ರಿಯೆ ಬಗ್ಗೆ ತಪ್ಪು ಮಾಹಿತಿ ನೀಡುವುದು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ, ಮಕ್ಕಳ ವಿಶೇಷ ಘಟಕಕ್ಕೆ (ಎಸ್.ಜೆ.ಪಿ.ಯು) ಪೊಲೀಸ್ ಸಹಾಯವಾಣಿ 112 , ಮಕ್ಕಳ ಸಹಾಯವಾಣಿ (ಚೈಲ್ಡ್ ಲೈನ್) ಸಂಖ್ಯೆ-1098 ,ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ (ಡಿ.ಸಿ.ಪಿ.ಯು) ಕೂಡಲೆ ಮಾಹಿತಿಯನ್ನು ನೀಡುವುದು. ಈ ರೀತಿ ಮಕ್ಕಳ ದತ್ತು ಪ್ರಕ್ರಿಯೆ ಬಗ್ಗೆ ತಪ್ಪು ಮಾಹಿತಿ ನೀಡಿ ಮಕ್ಕಳ ಹೆಸರಿನಲ್ಲಿ ಹಣ ಸಂಗ್ರಹಿಸುವ ಎನ್.ಜಿ.ಓ ಅಥವಾ ಇತರೆ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

error: Content is protected !!