ಲಾರಿ ಮಗುಚಿ ಇಬ್ಬರ ಸಾವು : ಚೇರಂಬಾಣೆಯಲ್ಲಿ ಘಟನೆ

July 17, 2021

ಮಡಿಕೇರಿ ಜು.17 : ಚೇರಂಬಾಣೆ ಕೊಳಗದಾಳು ಬಳಿಯ ಪಾಕ ರಸ್ತೆಯಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದ ಸಂದರ್ಭ ಕಾಂಕ್ರೀಟ್ ಲಾರಿ ಮಗುಚಿ ಬಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಗದಗ ಮೂಲದ ಸಂತೋಷ್ ಬಂಡಾರಿ(27) ಮತ್ತು ಪ್ರವೀಣ್(21) ಎಂಬವರೇ ಮೃತ ದುರ್ದೈವಿಗಳಾಗಿದ್ದಾರೆ.
ಕಳೆದ 2 ದಿನಗಳಿಂದ ಮಳೆ ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಚೇರಂಬಾಣೆ ಪಾಕ ಬಳಿ ಗುತ್ತಿಗೆದಾರರೊಬ್ಬರು ರಸ್ತೆಯ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದರು. ಶನಿವಾರ ಸಂಜೆ ವೇಳೆ ಮಡಿಕೇರಿಯಿಂದ ಕಾಂಕ್ರೀಟ್ ತುಂಬಿದ್ದ 10 ಚಕ್ರದ ಲಾರಿ ಕೊಳಗದಾಳು ಮಾರ್ಗವಾಗಿ ಪಾಕ ರಸ್ತೆಯ ತಡೆಗೋಡೆ ನಿರ್ಮಿಸುವ ಸ್ಥಳಕ್ಕೆ ತಲುಪಿದೆ.
ಬಳಿಕ ಲಾರಿಯನ್ನು ಮೇಲ್ಭಾಗದಲ್ಲಿ ನಿಲ್ಲಿಸಿಕೊಂಡು ಕೆಳ ಭಾಗದಲ್ಲಿರುವ ತಡೆಗೋಡೆಗೆ ಕಾಂಕ್ರೀಟ್ ಅನ್ನು ತುಂಬಿಸಲಾಗುತ್ತಿತ್ತು. ಈ ಸಂದರ್ಭ ತಡೆಗೋಡೆಯ ಪಕ್ಕದಲ್ಲಿ ಕುಸಿತ ಉಂಟಾಗಿ ಲಾರಿ ಏಕಾಏಕಿ ಕೆಳಗೆ ಮಗುಚಿ ಬಿದ್ದಿದೆ. ಈ ಸಂದರ್ಭ ಕೆಳಭಾಗದಲ್ಲಿದ್ದ ಇಬ್ಬರು ಕಾರ್ಮಿಕರಾದ ಗದಗ ಜಿಲ್ಲೆ ಇಂದಿರಾ ನಗರದ ನಿವಾಸಿಗಳಾದ ಸಂತೋಷ್ ಬಂಡಾರಿ ಹಾಗೂ ಪ್ರವೀಣ್ ಅವರುಗಳು ಮಣ್ಣಿನಡಿ ಸಿಲುಕಿಕೊಂಡಿದ್ದು, ಅಲ್ಲೇ ಪ್ರಾಣ ಬಿಟ್ಟಿದ್ದಾರೆ.
ಲಾರಿ ಸಹಿತ ಮಣ್ಣಿನ ರಾಶಿ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿಟಾಚಿ ಯಂತ್ರಗಳನ್ನು ತಂದು ಸಿಲುಕಿದ್ದ ಇಬರು ಕಾರ್ಮಿಕರ ಮೃತ ದೇಹಗಳನ್ನು ಹೊರ ತೆಗೆಯಲಾಯಿತು.
ಈ ದುರ್ಘಟನೆ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭಾಗಮಂಡಲ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಉಳಿದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

error: Content is protected !!