ಸೈಕಲ್ ಸಾಕು, ತೆನೆ ಬೇಕು : ಚೀಯಂಡಿರ ಕಿಶನ್ ಉತ್ತಪ್ಪ ಚಿತ್ತ ಜೆಡಿಎಸ್ ನತ್ತ

July 21, 2021

ಮಡಿಕೇರಿ ಜು.21 : ಸಮಾಜವಾದಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಹಾಗೂ ಚಿತ್ರನಟ ಚೀಯಂಡಿರ ಕಿಶನ್ ಉತ್ತಪ್ಪ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವೈಯುಕ್ತಿಕ ಕಾರಣಗಳಿಂದ ಸಮಾಜವಾದಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರೊಂದಿಗೆ ಪಕ್ಷ ಸೇರ್ಪಡೆ ಕುರಿತು ಬೆಂಬಲಿಗರೊಂದಿಗೆ ಚರ್ಚಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಲಾಗುವುದು. ಕೊಡಗು ಜೆಡಿಎಸ್ ಪ್ರಮುಖರು ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಪ್ಪನೆರವಂಡ ಶಾಂತಿಅಚ್ಚಪ್ಪ ಅವರೊಂದಿಗೂ ಜೆಡಿಎಸ್ ಗೆ ಸೇರುವ ಕುರಿತು ಚರ್ಚಿಸಿರುವುದಾಗಿ ಕಿಶನ್ ಉತ್ತಪ್ಪ ಹೇಳಿದ್ದಾರೆ.
2018ರಲ್ಲಿ ಸಮಾಜವಾದಿ ಪಾರ್ಟಿಯಿಂದ ವಿಧಾನಸಭಾ ಕ್ಷೇತ್ರಕ್ಕೆ ಯುವ ನಾಯಕನಾಗಿ ಸ್ಪರ್ಧಿಸಿದ್ದು, ಹಲವಾರು ಕಾರಣಗಳಿಂದ ನಾಮಪತ್ರವನ್ನು ಹಿಂಪಡೆಯಲಾಗಿದೆ. ಕುಶಾಲನಗರದ ತೊರೆನೂರು ಗ್ರಾಮದಲ್ಲಿ ರೂ.6 ಲಕ್ಷ ವೆಚ್ಚದಲ್ಲಿ ಶ್ರೀದುರ್ಗಾದೇವಿ ದೇವಾಲಯವನ್ನು ನಿರ್ಮಿಸಿ ಕೊಡಲಾಗಿದೆ. ಅಲ್ಲದೆ ಹಲವು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ಸಹಕರಿಸಿದ್ದು, ಪ್ರಾಕೃತಿಕ ವಿಕೋಪದ ಸಂದರ್ಭ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಗಿದೆ.
ನನ್ನ ಸಮಾಜ ಸೇವೆಗಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿರುವ ಕಿಶನ್ ಉತ್ತಪ್ಪ, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮತ್ತಷ್ಟು ಜನಪರ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

error: Content is protected !!