ಸಿನಿಮಾ ಸ್ಪರ್ಧೆ : ತಮಗೆ ಬೇಕಾದವರಿಗೆ ಕೊಡವ ಸಾಹಿತ್ಯ ಅಕಾಡೆಮಿ ಬಹುಮಾನ ನೀಡಿದೆ !

July 21, 2021

ಮಡಿಕೇರಿ ಜು.21 : ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ ಕೊಡವ ಭಾಷೆ ಮತ್ತು ಅದರ 18 ಉಪಭಾಷೆಗಳ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆ ವಿಷಯಗಳನ್ನು ಆಧರಿಸಿ ಹದಿನೈದು ನಿಮಿಷಗಳ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆದರೆ ಬಹುಮಾನ ವಿತರಣೆಯ ಸಂದರ್ಭ ಅಕಾಡೆಮಿ ತಾರತಮ್ಯ ತೋರಿದ್ದು, ತಮಗೆ ಬೇಕಾದವರಿಗೆ ಮೊದಲೇ ನಿರ್ಧರಿಸಿದಂತೆ ಬಹುಮಾನ ನೀಡಿ ಉಳಿದವರಿಗೆ ಅನ್ಯಾಯ ಮಾಡಲಾಗಿದೆ ಎಂದು ಚಿತ್ರ ವಿತರಕ ಬಾಳೆಯಡ ಪ್ರತೀಶ್ ಪೂವಯ್ಯ ಆರೋಪಿಸಿದ್ದಾರೆ.
ಬಹುಮಾನಕ್ಕಾಗಿ ಚಿತ್ರಗಳನ್ನು ಆಯ್ಕೆ ಮಾಡಲು ಚಿತ್ರರಂಗದ ಬಗ್ಗೆ ನುರಿತವರನ್ನು ತೀರ್ಪುಗಾರರನ್ನಾಗಿ ನೇಮಕ ಮಾಡದೆ ಯಾವುದೇ ಗಂಧಗಾಳಿ ಇಲ್ಲದವರಿಗೆ ಅಕಾಡೆಮಿ ಜವಾಬ್ದಾರಿ ವಹಿಸಿತ್ತು ಎಂದು ಅವರು ಟೀಕಿಸಿದ್ದಾರೆ.
ಮೊದಲನೇ ಮತ್ತು ಎರಡನೇ ಬಹುಮಾನಿತ ಚಿತ್ರದಲ್ಲಿ ಕೊಡಗಿನ ಸಂಸ್ಕೃತಿ, ಆಚಾರ ವಿಚಾರಧಾರೆಗಳಿಗೆ ಸಂಬಂಧಪಟ್ಟ ಯಾವುದೇ ವಿಷಯಗಳಿರಲಿಲ್ಲ. ಬದಲಿಗೆ ಕೇವಲ ಸಾಮಾಜಿಕ ಕಥೆಯಷ್ಟೇ ಅಡಕವಾಗಿತ್ತು.
ತಾವು ನಿರ್ದೇಶಿಸಿದ “ಪೊಮ್ಮಣ್ಣ್” ಕಿರುಚಿತ್ರದಲ್ಲಿ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸಲಾಗಿತ್ತು. ತೀರ್ಪುಗಾರರು ತಮ್ಮ ಚಿತ್ರದ ಪರ ನೀಡಿದ ತೀರ್ಪನ್ನು ಅಕಾಡೆಮಿಯ ಇಬ್ಬರು ಸದಸ್ಯರು ತಿರುಚಿ ತಮಗೆ ಬೇಕಾದವರಿಗೆ ಬಹುಮಾನ ದೊರಕುವಂತೆ ನೋಡಿಕೊಂಡಿದ್ದಾರೆ ಎಂದು ಪ್ರತೀಶ್ ಪೂವಯ್ಯ ಗಂಭೀರ ಆರೋಪ ಮಾಡಿದ್ದಾರೆ.
ತಾನು ಹಲವು ಕೊಡವ ಚಿತ್ರಗಳನ್ನು ನಿರ್ದೇಶಿಸಿದ್ದು, ಸಾಕಷ್ಟು ಅನುಭವ ಹೊಂದಿದ್ದೇನೆ. 80 ಕ್ಕೂ ಹೆಚ್ಚು ಮಂದಿ “ಪೊಮ್ಮಣ್ಣ್” ಚಿತ್ರದಲ್ಲಿ ದುಡಿದಿದ್ದು, ಸುಮಾರು 2 ತಿಂಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಅಕಾಡೆಮಿ ಮೊದಲ ಮತ್ತು ದ್ವಿತೀಯ ಬಹುಮಾನಕ್ಕಾಗಿ ಆಯ್ಕೆ ಮಾಡಿದ ಚಿತ್ರಗಳು ಹಾಗೂ ನಾವು ನಿರ್ದೇಶಿಸಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಿ. ಜನರು ಯಾವ ಚಿತ್ರಕ್ಕೆ ಹೆಚ್ಚು ಮನ್ನಣೆ ನೀಡುತ್ತಾರೆ ನೋಡೋಣ ಎಂದು ಪ್ರತೀಶ್ ಸವಾಲು ಹಾಕಿದರು. ದೊರೆತ ಪ್ರಶಸ್ತಿ ಪತ್ರ ಮತ್ತು ನಗದನ್ನು ಈಗಾಗಲೇ ಹಿಂದಿರುಗಿಸಿದ್ದೇವೆ, ತೀರ್ಪಿನ ವಿರುದ್ಧ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಚಿತ್ರನಟರಾದ ಬಿದ್ದಂಡ ಉತ್ತಮ್ ಪೊನ್ನಣ್ಣ ಹಾಗೂ ಬಲ್ಯಂಡ ವರ್ಷ ಈ ಸಂದರ್ಭ ಉಪಸ್ಥಿತರಿದ್ದರು.

error: Content is protected !!