ಸೋಮವಾರಪೇಟೆ : ಕಕ್ಷಿದಾರರಿಗೆ ಸಮಸ್ಯೆಯ ಮೂಲವನ್ನು ಅರ್ಥೈಸಿ ಪರಿಹಾರ ಕಲ್ಪಿಸುವ ಪ್ರಯತ್ನ

July 21, 2021

ಸೋಮವಾರಪೇಟೆ ಜು.21 : ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ರಾಜ್ಯದ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಆ.14 ರಂದು ಮೆಗಾ ಲೋಕಾ ಅದಾಲತ್ ಆಯೋಜಿಸಲಾಗಿದೆ. ಅಂದು ಸೋಮವಾರಪೇಟೆ ಹಾಗು ಕುಶಾಲನಗರ ನ್ಯಾಯಾಲಯಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯ ವರಗೆ ಅದಾಲತ್ ನಡೆಯಲಿದೆ ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಗೋಕುಲ ಹೇಳಿದರು.
ಸಿವಿಲ್ ವ್ಯಾಜ್ಯಗಳು ಹಾಗು ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ಕೊಳ್ಳಬಹುದಾಗಿದೆ ಎಂದು ಸೋಮವಾರ ನ್ಯಾಯಾಲಯ ಸಭಾಂಗಣದಲ್ಲಿ ಈಚೆಗೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಕ್ಷಿದಾರರಿಗೆ ಸಮಸ್ಯೆಯ ಮೂಲವನ್ನು ಅರ್ಥ ಮಾಡಿಸಿ ಪರಿಹಾರ ಕಲ್ಪಿಸುವ ಪ್ರಯತ್ನವನ್ನು ನ್ಯಾಯಿಕ ಸಂಧಾನಕಾರರು ಮಾಡಲಿದ್ದಾರೆ. ಜನಸಾಮಾನ್ಯರಿಗೆ ಅನುಕೂಲ, ಶೀಘ್ರನ್ಯಾಯ ಹಾಗು ಬಯಸಿದ ನ್ಯಾಯ ಅದಾಲತ್‌ನಲ್ಲಿ ಸಿಗಲಿದೆ. ಎರಡು ಕಡೆಯವರು ಪರಸ್ಪರ ಒಪ್ಪಿದರೆ ಮಾತ್ರ ರಾಜೀಸಂಧಾನ ಮಾಡಲಾಗುತ್ತದೆ. ಯಾವುದೇ ಒತ್ತಡವಿರುವುದಿಲ್ಲ. ರಾಜೀ ಆಗದಿದ್ದರೆ, ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ನ್ಯಾಯ ಪಡೆಯಬಹುದಾಗಿದೆ ಎಂದು ಹೇಳಿದರು.
ನ್ಯಾಯಾಲಯದಲ್ಲಿ 3 ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. ರಾಜೀ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗು ಸಿವಿಲ್ ಪ್ರಕರಣಗಳ ಕ್ಷಕಿದಾರರಿಗೆ ನೋಟಿಸ್ ನೀಡಲಾಗುತ್ತದೆ. ಅಲ್ಲದೆ ಅವರ ವಕೀಲರ ಮೂಲಕವೂ ಅದಾಲತ್‌ಗೆ ಮನವಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಮೈಂಟೆನ್ಸ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ, ನ್ಯಾಯಾಧೀಕರಣ ಪ್ರಕರಣಗಳು, ವೇತನ ಹಾಗು ಭತ್ಯೆಗೆ ಸಂಬಂಧಿಸಿದ ಸೇವಾ ಪ್ರಕರಣಗಳು. ಬಾಡಿಗೆ, ಅನುಬೋಗ ಹಕ್ಕುಗಳು, ಭೂಸ್ವಾದೀನ,ಕಂದಾಯ ಪ್ರಕರಣಗಳು ಹೀಗೆ ಹಲವು ರೀತಿಯ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ, ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಪದ್ಮನಾಭ ಇದ್ದರು.

error: Content is protected !!