ನಾಪೋಕ್ಲು : 24 ಗಂಟೆಗಳಲ್ಲಿ ಚೋರರ ಬಂಧನ

27/07/2021

ಮಡಿಕೇರಿ ಜು.27 : ಮನೆಯೊಂದರ ಶೆಡ್‌ನಲ್ಲಿಟ್ಟಿದ್ದ ಜನರೇಟರ್‌ವೊಂದನ್ನು ಕಳವು ಮಾಡಿದ ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊದವಾಡ ನಿವಾಸಿಗಳಾದ ಬಿ.ಎಂ.ಹಮೀದ್(35) ಹಾಗೂ ಬೇಟೆಬಾಣೆ ಎ.ಬದ್ರುದ್ದೀನ್(36) ಬಂಧಿತ ಆರೋಪಿಗಳು. ಬಂಧಿತರಿಂದ 45 ಸಾವಿರ ಮೌಲ್ಯದ ಜನರೇಟರ್ ಮತ್ತು ಕಳವು ಮಾಲನ್ನು ಸಾಗಾಟಕ್ಕೆ ಬಳಸಿದ್ದ 2.50 ಲಕ್ಷ ರೂ. ಮೌಲ್ಯದ ಪಿಕ್‌ಅಪ್ ಜೀಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಿರುಂದಾಡು ಗ್ರಾಮದ ಮನೆಯೊಂದರಲ್ಲಿ ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ನೂತನ ಜನರೇಟರ್ ನ್ನು ಖರೀದಿಸಿ ಅದನ್ನು ಶೆಡ್‌ನಲ್ಲಿ ಅಳವಡಿಸಲಾಗಿತ್ತು. ಜು.25ರ ರಾತ್ರಿ 8 ಗಂಟೆಯಿಂದ ಜು.26ರ ಬೆಳಗ್ಗೆ 7 ಗಂಟೆಯ ಸಮಯದ ಒಳಗೆ ಯಾರೋ ದುಷ್ಕರ್ಮಿಗಳು ಜನರೇಟರ್ ಕಳವು ಮಾಡಿರುವುದಾಗಿ ಮನೆಯ ಮಾಲೀಕರು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಹೊದವಾಡ ಗ್ರಾಮದ ಹಮೀದ್ ಮತ್ತು ಬದ್ರುದ್ದೀನ್ ಎಂಬುವವರನ್ನು ವಿಚಾರಣೆಗೆ ಒಳಪಡಿಸಿದ್ದರು.
ಆರೋಪಿಗಳು ಜನರೇಟರ್ ಕಳವು ಪ್ರಕರಣ ಬಗ್ಗೆ ಸತ್ಯ ಒಪ್ಪಿಕೊಂಡರು. ನಂತರ ಪೊಲೀಸರು ಜನರೇಟರ್ ಮತ್ತು ಅದನ್ನು ಸಾಗಿಸಲು ಬಳಸಿದ್ದ ಪಿಕ್ ಅಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಂದಿತ ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಶೈಲೇಂದ್ರ ನೇತೃತ್ವದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಠಾಣಾಧಿಕಾರಿ ರವಿ ಕಿರಣ್, ಎಎಸ್‌ಐ ಕುಶಾಲಪ್ಪ, ಸಿಬ್ಬಂದಿಗಳಾದ ಸಾಜನ್, ರವಿಕುಮಾರ್, ಎಸ್.ಆರ್.ಮಹೇಶ್ ಹಾಗೂ ನವೀನ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.