ಸೈನಿಕನ ಮೇಲೆ ಹಲ್ಲೆ : ಕೊಡಗು ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ

27/07/2021

ಮಡಿಕೇರಿ ಜು.27 : ದೇಶ ಕಾಯುವ ಸೈನಿಕ ಹಾಗೂ ಆತನ ಕುಟುಂಬದ ಮೇಲೆ ಬೋಯಿಕೇರಿ ಬಳಿ ನಡೆದಿರುವ ಹಲ್ಲೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಮತ್ತು ಕಠಿಣ ಶಿಕ್ಷಗೆ ಗುರಿ ಪಡಿಸಬಹುದಾದ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ನಾಪೋಕ್ಲು ಕೊಡವ ಸಮಾಜದ ಆಡಳಿತ ಮಂಡಳಿ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಕಾರು ಡಿಕ್ಕಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಿದ ಯೋಧ ಅಶೋಕ್ ಕುಮಾರ್ ಹಾಗೂ ಅವರ ಕುಟುಂಬದ ಮೇಲೆ ಗುಂಪು ಹಲ್ಲೆ ನಡೆದಿದೆ. ಕಳೆದ 18 ವರ್ಷಗಳಿಂದ ದೇಶವನ್ನು ಕಾಯುತ್ತಿರುವ ಒಬ್ಬ ಸೈನಿಕನ ಮೇಲೆ ನಡೆದಿರುವ ಹಲ್ಲೆಯನ್ನು ಪೊಲೀಸರು ಲಘುವಾಗಿ ಕಾಣುತ್ತಿದ್ದಾರೆ. ಬಂಧಿಸಲ್ಪಟ್ಟ ಮೂವರನ್ನು 24 ಗಂಟೆಯೊಳಗೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವಯೋವೃದ್ಧರು, ಮಹಿಳೆಯರೂ ಎಂದು ನೋಡದೆ ಹಲ್ಲೆ ನಡೆಸಿರುವುಲ್ಲದೆ ಕೊಡವರ ಸಾಂಪ್ರದಾಯಿಕ ಆಭರಣ ಪತಾಕ್ ನ್ನು ಕಸಿದುಕೊಂಡು ದೌರ್ಜನ್ಯ ನಡೆಸಲಾಗಿದೆ. ಈ ಬೆಳವಣಿಗೆಯನ್ನು ಸಹಿಸಲು ಸಾಧ್ಯವಿಲ್ಲವೆಂದು ಮನುಮುತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಬ್ಬ ಸೈನಿಕ ಹಾಗೂ ಆತನ ಕುಟುಂಬದ ಮೇಲೆ ನಡೆದಿರುವ ಹಿಂಸಾಚಾರ ದೇಶದ್ರೋಹಕ್ಕೆ ಸಮವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅವರು ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಜಾಮೀನು ನೀಡಬಾರದೆಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸದಿದ್ದರೆ ಕೊಡವ ಸಮಾಜಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.