ಸೋಮವಾರಪೇಟೆ : ರಾತ್ರಿ ವೇಳೆ ಅಕ್ರಮ ವಲಸಿಗರು ಬಂದು ಸೇರುತ್ತಿದ್ದಾರೆ

27/07/2021

ಸೋಮವಾರಪೇಟೆ ಜು.27 : ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಾರ್ಮಿಕರ ಸೋಗಿನಲ್ಲಿರುವ ಅಕ್ರಮ ವಲಸಿಗರ ದಾಖಲೆಗಳ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಬೇಳೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಜಿ.ಪ್ರಶಾಂತ್ ಒತ್ತಾಯಿಸಿದ್ದಾರೆ.
ಅಸ್ಸಾಂ ರಾಜ್ಯದವರ ಸೋಗಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸಿಗರು ಬರುತ್ತಿದ್ದಾರೆ. ರಾತ್ರಿ ಸಮಯದಲ್ಲೇ ಬಂದಿಳಿಯುತ್ತಿದ್ದಾರೆ. ಇವರ ಬಗ್ಗೆ ಪೊಲೀಸರು ನಿಗಾ ವಹಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಮಿಕರ ಸೋಗಿನ ವಲಸಿಗರಿಂದ ಇಲ್ಲಿನ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿ ಸರಿಯಾದ ಕೂಲಿ ಕೆಲಸ ಸಿಗುತ್ತಿಲ್ಲ. ಈ ಕಾರಣದಿಂದ ಅಕ್ರಮ ವಲಸೆಗೆ ತಾಲೂಕು ಆಡಳಿತ ತಡೆ ಹಾಕಬೇಕು ಎಂದರು.
ವಲಸಿಗರು ಬಂದಾಗ ಪೂರ್ಣ ದಾಖಲಾತಿಗಳನ್ನು ಪಂಚಾಯಿತಿ ಪಿಡಿಒ ಪರಿಶೀಲಿಸಬೇಕು. ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು. ಸೂಕ್ತ ದಾಖಲಾತಿ ಇಲ್ಲದ ವಲಸಿಗರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸೋಮವಾರ ರಾತ್ರಿ 37 ವಯಸ್ಕರು ಮತ್ತು 20 ಮಕ್ಕಳು ಪಟ್ಟಣಕ್ಕೆ ಬಂದಿದ್ದಾರೆ. ಅವರನ್ನು ಕರೆತಂದ ಯೂಸುಫ್ ಆಲಿ ಎಂಬ ಏಜೆಂಟನ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲಾತಿಗಳು ತಾಳೆಯಾಗುತ್ತಿಲ್ಲ. ಎಲ್ಲವೂ ನಕಲಿ ಎಂಬ ಸಂಶಯವಿದೆ. ವಲಸಿಗರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈಗ ಎಲ್ಲರೂ ವಿವಿಧ ಕಾಫಿ ತೋಟಗಳಿಗೆ ತೆರಳಿದ್ದಾರೆ. ಎಲ್ಲರ ಮೂಲ ದಾಖಲಾತಿಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಕೊಡಗಿನಲ್ಲಿರುವ ಅಕ್ರಮ ವಲಸಿಗರ ಬಗ್ಗೆ ಎನ್‌ಐಎ ಯಿಂದ ತನಿಖೆಯಾದರೆ, ಅಕ್ರಮ ಜಾಲ ಬಯಲಿಗೆ ಬರಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಬಿ.ಜೆ.ದೀಪಕ್ ಹೇಳಿದರು.
ಕಾರ್ಮಿಕರ ಸೋಗಿನಲ್ಲಿ ಬಂದವರಿಂದ ತಾಲೂಕಿನಲ್ಲಿ ಅನಾಹುತ ಸಂಭವಿಸಿದರೆ, ತೋಟ ಮಾಲೀಕರೇ ನೇರ ಹೊಣೆಯಾಗುತ್ತಾರೆ ಎಂದು ಹಿಂದು ಜಾಗರಣಾ ವೇದಿಕೆಯ ತಾಲೂಕು ಅಧ್ಯಕ್ಷ ಉಮೇಶ್ ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಪ್ರಶಾಂತ್ ಇದ್ದರು.