ಸೋಲಾರ್ ಬೇಲಿಗೆ ಕಾಡಾನೆ ಬಲಿ : ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಸಂಶಯ

29/07/2021

ಮಡಿಕೇರಿ ಜು.29 : ಹೊಲಕ್ಕೆ ಅಳವಡಿಸಿದ್ದ ಸೋಲಾರ್ ತಂತಿ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಕುಶಾಲನಗರದ ಸಮೀಪದ ಅತ್ತೂರು ಮೀಸಲು ಅರಣ್ಯ ಪ್ರದೇಶದ ಬಳಿ ನಡೆದಿದೆ.
ಅರಣ್ಯದಂಚಿನ ಹೊಸಕಾಡು ಗ್ರಾಮದ ಶುಂಠಿ ಹೊಲದಲ್ಲಿ ಸುಮಾರು 35 ವರ್ಷದ ಗಂಡಾನೆಯ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅರಣ್ಯದಿಂದ ಹೊರ ಬಂದ ಕಾಡಾನೆ, ತಡರಾತ್ರಿ ಕೃಷಿಕ ಚಂದ್ರಯ್ಯ ಎಂಬವರ ಶುಂಠಿ ಹೊಲ ದಾಟುವ ಸಂದರ್ಭ, ಹೊಲಕ್ಕೆ ಅಳವಡಿಸಿದ್ದ ಸೋಲಾರ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವುದು ಗೋಚರಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಸೋಲಾರ್ ತಂತಿ ಮೂಲಕ ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಸಂಶಯವಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ತಿಳಿಸಿದ್ದಾರೆ.
ಕುಶಾಲನಗರ ಪೊಲೀಸರಿಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ಶೈಲೇಂದ್ರ ಕುಮಾರ್, ವೃತ್ತ ನಿರೀಕ್ಷಕ ಮಹೇಶ್, ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಇಲಾಖೆಯ ಅಭಿಯಂತರ ವಿನಯ ಕುಮಾರ್ ಹಾಗೂ ವಿಶೇಷ ವಿಚಕ್ಷಣಾ ದಳದ ಅಧಿಕಾರಿಗಳು ಘಟನೆಯ ಬಗ್ಗೆ ವಿವರ ಪಡೆದರು.