ಗಡಿಪಾರಿಗೆ ಆಗ್ರಹ

30/07/2021

ಮಡಿಕೇರಿ ಜು.30 : ಕುಶಾಲನಗರ ರಸ್ತೆಯ ಬೋಯಿಕೇರಿ ಬಳಿ ನಡೆದ ಅಪಘಾತವನ್ನು ನೆಪ ಮಾಡಿಕೊಂಡು ಸೈನಿಕ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು, ಬಿಜೆಪಿ, ಮಾಜಿ ಯೋಧರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಸದಸ್ಯರು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸೈನಿಕ ಮತ್ತು ಆತನ ಕುಟುಂಬ ವರ್ಗದವರ ಮೇಲೆ ಹಲ್ಲೆ ನಡೆಸಿದವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು. ಆರೋಪಿಗಳ ವಿರುದ್ಧ ಮೃದು ಧೋರಣೆ ತಾಳುವ ಮೂಲಕ ಬಂಧಿತ ಐವರು ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆಯುವಂತೆ ಮಾಡಲಾಗಿದೆ. 20ಕ್ಕೂ ಹೆಚ್ಚು ಮಂದಿ ಸೈನಿಕ ಮತ್ತವರ ಕುಟುಂಬದವರ ಮೇಲೆ ಮಾರಣಾಂತಿಕ ಗುಂಪು ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದಾರೆ. ಘಟನೆ ಗಂಭೀರವಾಗಿದ್ದರೂ ಐವರನ್ನು ಮಾತ್ರ ಬಂಧಿಸಿ ಜಾಮೀನು ನೀಡಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದರು. ಸ್ಥಳದಲ್ಲಿದ್ದ ಮಡಿಕೇರಿ ತಹಶೀಲ್ದಾರ್ ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟುಹಿಡಿದರು. ಇಲ್ಲವಾದಲ್ಲಿ ಕೊಡಗು ಬಂದ್‌ಗೆ ಕರೆ ನೀಡುವುದಾಗಿ ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಹಿಂದೂ ಸಂಘಟನೆಗಳ ಪ್ರಮುಖರು ಮತ್ತಿತರರು ಎಚ್ಚರಿಕೆ ನೀಡಿದರು.
ಹಿಂದೂ ಜಾಗರಣ ವೇದಿಕೆಯ ಮುಖಂಡ ಟಿ.ಕೆ.ಉಲ್ಲಾಸ್ ಮಾತನಾಡಿ ದೇಶದ ರಕ್ಷಣೆಗೆ ಮಹಾನ್ ಕೊಡುಗೆ ನೀಡಿದ ಯೋಧರ ನಾಡಿನಲ್ಲಿಯೇ ಇಂದು ಯೋಧರಿಗೆ ರಕ್ಷಣೆ ಇಲ್ಲದಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಈ ಹಿಂದೆಯೂ ನಡೆದಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಮಾತನಾಡಿ, ಕೊಡವ ಸಮುದಾಯ ಮತ್ತು ಕೊಡಗಿನ ಜನರು ಸಹಿಸಲು ಸಾಧ್ಯವಿಲ್ಲವೆಂದರು.
ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಪ್ರವೀಣ್ ಉತ್ತಪ್ಪ ಮಾತನಾಡಿದರು.
ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿದರು. ಬಳಿಕ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಿವಣ್ಣ ಅವರು ಪ್ರತಿಭಟನೆಯ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಎಸ್.ಪಿ ಕ್ಷಮಾಮಿಶ್ರ, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಎಲ್ಲಾ ಆರೋಪಿಗಳ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ನ್ಯಾಯೋಚಿತ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಅಖಿಲ ಭಾರತ ಹಿಂದೂ ಮಹಾ ಸಭಾ, ಕರ್ನಾಟಕ ಮಾಜೀ ಸೈನಿಕರ ಸಂಘ, ಕೊಡಗು ಜಿಲ್ಲಾ ಮಾಜೀ ಸೈನಿಕರ ಸಂಘ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ, ಕೊಡಗು ಜಿಲ್ಲಾ ಬಿಜೆಪಿ, ಜಿಲ್ಲಾ ಬಿಜೆಪಿ ಯುವ ಮೋರ್ಛಾ, ಅಖಿಲ ಕೊಡವ ಸಮಾಜ, ಅಖಿಲ ಕೊಡವ ಸಮಾಜ ಯೂತ್ ವಿಂಗ್, ಮಕ್ಕಂದೂರು ಕೊಡವ ಸಮಾಜ, ನಾಪೋಕ್ಲು ಕೊಡವ ಸಮಾಜ, ಕೊಡಗು ಗೌಡ ಸಮಾಜ, ಹಿಂದೂ ಮಲೆಯಾಳಿ ಸಂಘ, ಕೊಡವ ನ್ಯಾಷನಲ್ ಕೌನ್ಸಿಲ್, ಕರ್ನಾಟಕ ಜನಪರ ವೇದಿಕೆ ಸೇರಿದಂತೆ ಹತ್ತಾರು ಸಂಘಟನೆಗಳು ಬೇಷರತ್ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಬೆಳಗಾಂ, ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರು ಮತ್ತಿತ್ತರ ಕಡೆಗಳಿಂದ ಮಾಜೀ ಸೈನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಹಿಂದೂ ಜಾಗರಣಾ ವೇದಿಕೆಯ ಕುಕ್ಕೇರ ಅಜಿತ್, ಮಹೇಶ್, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ನಗರ ಸಭಾ ಸದಸ್ಯರು, ವಿವಿಧ ಹಿಂದೂ ಪರ ಸಂಘಟನೆಯ ಪ್ರಮುಖರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಸೈನಿಕ ಮತ್ತು ಆತನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಹಲ್ಲೆಗೆ ಒಳಗಾದ ಕುಟುಂಬ ತನ್ನ ಗ್ರಾಮ ಪಂಚಾಯಿತಿಗೆ ಸೇರಿದವರಾಗಿದ್ದು, ಅವರೊಂದಿಗೆ ಆತ್ಮೀಯ ಒಡನಾಟವಿದೆ. ಬೆಂಗಳೂರಿನಲ್ಲಿದ್ದ ಸಂದರ್ಭ ಹಲ್ಲೆ ವಿಚಾರ ಅರಿವಿಗೆ ಬಂದಿದ್ದು, ಮೇಲ್ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರಕಾರ ಕೂಡ ಈ ಕುರಿತು ಸೂಕ್ತ ಕ್ರಮಕೈಗೊಳ್ಳಲಿದೆ.
ಕೆ.ಜಿ. ಬೋಪಯ್ಯ, ಶಾಸಕರು
=================
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂನ ವತಿಯಿಂದ ಘಟನೆಯ ಕುರಿತು ಸೈನ್ಯದ ಸದರನ್ ವಿಂಗ್, ನಾರ್ಥನ್ ವಿಂಗ್, ಮೇಜರ್ ಜನರಲ್‌ಗಳಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಲಾಗಿದೆ. ಆರೋಪಿಗಳ ವಿರುದ್ದ ಸೈನ್ಯದ ಕಾನೂನಿನಂತೆ ಕ್ರಮ ಕೈಗೊಳ್ಳಲು ಕೂಡ ಆಗ್ರಹಿಸಲಾಗಿದೆ. ಸೈನಿಕರ ಮೇಲೆ ಹಲ್ಲೆ ನಡೆಸುವಂತಹ ಕೃತ್ಯಗಳು ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ನಡೆಯಬಾರದು. ಹಲ್ಲೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು.
ಬಿದ್ದಂಡ ನಂಜಪ್ಪ
ನಿವೃತ ಮೇಜರ್