ಕೊಡಗಿನ ಗಡಿಗ್ರಾಮಗಳ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು

31/07/2021

ಮಡಿಕೇರಿ ಜು.31 : ಕೊಡಗು ಜಿಲ್ಲೆಯ ಆಡಳಿತದಲ್ಲೂ ಕನ್ನಡ ಅನುಷ್ಠಾನ ಗೊಳ್ಳಲಿ, ಗಡಿಗ್ರಾಮಗಳ ಸಮಸ್ಯೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕಿದೆ ಎಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಬೆಂಗಳೂರಿನ ಗಾಂಧಿಭವನದ ಶ್ರಿ. ಮಹಾದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕನ್ನಡ ಜಾಗೃತಿ ಸಮಿತಿ ಸದಸ್ಯರ ಕಾರ್ಯಾಗಾರ ಹಾಗೂ ಸಮಿತಿ ಸದಸ್ಯರ ಸಂವಾದ ಸಭೆಯಲ್ಲಿ ಜಿಲ್ಲೆಯ ಪ್ರತಿನಿದಿಗಳಾದ ಎಸ್.ಮಹೇಶ್, ಕಲಾವಿದ ರಾಜು ಹಾಗೂ ರಂಜಿತ ಕಾರ್ಯಪ್ಪ ತಂಡ ಜಿಲ್ಲೆಯ ಆಡಳಿತದಲ್ಲಿ ಕನ್ನಡ ಅನುಷ್ಠಾನ ಹಾಗೂ ಅಂತರರಾಜ್ಯ ಗಡಿಗ್ರಾಮಗಳ ಸಮಸ್ಯೆಯ ಬಗ್ಗೆ ಪ್ರಾಧಿಕಾರ ಸರ್ಕಾರದ ಗಮನ ಸೆಳೆಯಬೇಕೆಂದು ಒತ್ತಾಯಿಸಿದರು.ಕರ್ನಾಟಕ,ಕೆರಳರಾಜ್ಯ ಗಡಿ ಜಿಲ್ಲೆ ಕೊಡಗು  ಇಲ್ಲಿನ ಗಡಿ ಗ್ರಾಮಗಳಾದ  ಕುಟ್ಟ,ಮಾಕುಟ್ಟ ಹಾಗೂ ಕರಿಕೆ ಗ್ರಾಮಗಳು  ಕೇರಳ ರಾಜ್ಯದ ಪ್ರಭಾವಕ್ಕೆಒಳಗಾಗಿವೆ ಇಲ್ಲಿನ ಜನತೆ ಕೆಲವೊಂದು ವಿಚಾರಗಳಿಗೆ ಕೇರಳ ರಾಜ್ಯವನ್ನೇ ಅವಲಂಬಿಸಬೇಕಾಗಿರುವುದು ವಿಪರ್ಯಾಸ.ಇಲ್ಲಿನ ಕನ್ನಡ ಶಾಲೆಗಳ ಪರಿಸ್ಥಿತಿ,ಜನಜೀವನ ಕನ್ನಡ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇಲ್ಲದಿರುವಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಕೊಡಗು ಜಿಲ್ಲೆಎಂಬುದು ಅಧಿಕಾರಿಗಳ ವಲಯದಲ್ಲಿ ಮಡಿಕೇರಿ ಜಿಲ್ಲೆಎಂಬಂತಾಗಿದೆ ಆದರೆ ಇದು ಕೊಡಗುಜಿಲ್ಲೆಯಾಗಿಯೇ ಉಳಿಯಬೇಕೆಂದು ಆಶಿಸಿದರು.ಕನ್ನಡ ಅಭಿವೃದ್ಧಿಗೆ ಪೂರಕವಾಗಿ ಗಡಿ ಉತ್ಸವ ಹಾಗೂ ಕೊಡಗು ಉತ್ಸವಗಳು ಹಲವಾರು ವರ್ಷಗಳಿಂದ ನೆಡೆಯುತಿಲ್ಲಾ ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಗಮನಸೆಳೆದು ಜಿಲ್ಲೆಯಲ್ಲೂ ಕನ್ನಡ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣಮಾಡಬೇಕಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ನಡೆಯುವ ಜಿಲ್ಲಾ ಹಾಗೂ ಕೆ.ಡಿ.ಪಿ ಸಭೆಗಳಿಗೆ ಕನ್ನಡ ಜಾಗೃತಿ ಸಮಿತಿಯ ಸದಸ್ಯರನ್ನು ಆಹ್ವಾನಿಸಬೇಕು ಆಗ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳು ಬೆಳಕಿಗೆ ಬರುತದೆ ಎಂದು ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹಾಗೂ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ  ಜಿಲ್ಲೆಯಲ್ಲಿ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳಬಗ್ಗೆ ಕ್ರೋಡಿಕರಿಸಿ  ಲಿಖಿತವಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.ಈ ಸಂದರ್ಭ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ,ಸಂಸ್ಕೃತಿ ಚಿಂತಕ ಸುಚೇಂದ್ರ ಪ್ರಸಾದ್,ಯುವಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೋಲಿಬೆಲೆ,ಸಾಮಾಜಿಕ ಕಾರ್ಯಕರ್ತ ವಾದಿರಾಜ,ಪ್ರಾಧಿಕಾರದ ಸದಸ್ಯರುಗಳಾದ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ,ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಶ,ಗುಬ್ಬಿಗೂಡು ರಮೇಶ್,ರೋಹಿತ್ ಚಕ್ರತೀರ್ಥ,ಡಾ.ಸಿ.ಎ. ಕಿಶೋರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.