ಅಪಘಾತ ಪ್ರಕರಣವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ

31/07/2021

ಮಡಿಕೇರಿ ಜು.31 : ಬೋಯಿಕೇರಿ ಸಮೀಪ ನಡೆದ ಅಪಘಾತ ಪ್ರಕರಣವನ್ನು ಮುಂದಿನ ಚುನಾವಣೆಗಳಿಗಾಗಿ ಬಿಜೆಪಿ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಶಾಂತಿ ಮೂಡಿಸುವ ಬಿಜೆಪಿ ರಾಜಕಾರಣದ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಕೊಡಗಿನ ಜನ ಜಂಜಾಟದ ನಡುವೆ ದಿನ ಕಳೆಯುತ್ತಿದ್ದಾರೆ. ಜನಪರ ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕಾದ ಆಡಳಿತ ಪಕ್ಷ ಬಿಜೆಪಿ ಈ ಕಷ್ಟದ ಸಂದರ್ಭದಲ್ಲೂ ಕ್ಷÄಲ್ಲಕ ರಾಜಕಾರಣ ಮಾಡುತ್ತಿದೆ. ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಿದ ಪ್ರತಿಭಟನೆ ನ್ಯಾಯೋಚಿತವಾಗಿರಲಿಲ್ಲವೆಂದು ಟೀಕಿಸಿದರು.
ಅಪಘಾತ ಪ್ರಕರಣ ನ್ಯಾಯಾಲಯದಲ್ಲಿದೆ, ಅಲ್ಲದೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹೀಗಿದ್ದರೂ ಕೆಲವರು ಪ್ರಕರಣದ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಗಣೇಶ್, ತಪ್ಪು ಯಾರು ಮಾಡಿದ್ದರೂ ಶಿಕ್ಷಯಾಗಬೇಕೆಂದು ತಿಳಿಸಿದರು.
ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್, ಎಂ.ವೈ.ಯೂಸುಫ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಿದ್ರುಪಣೆ ನಂದ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಸಿ.ಎಸ್.ನಾಗರಾಜು ಹಾಗೂ ಕುಶಾಲನಗರ ತಾಲ್ಲೂಕು ಅಧ್ಯಕ್ಷ ಪಿ.ಡಿ.ರವಿಕುಮಾರ್ ಉಪಸ್ಥಿತರಿದ್ದರು.