ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಆಚರಣೆ

02/08/2021

ಮಡಿಕೇರಿ, ಆ. 2 : ಪ್ರತಿಯೊಬ್ಬರೂ ನೈಸರ್ಗಿಕ , ಪರಿಸರ ಸಂಪನ್ಮೂಲಗಳನ್ನು ಉಳಿಸುವ ಮೂಲಕ ಪ್ರಕೃತಿ ಸಂರಕ್ಷಣೆಗೆ ಪಣ ತೊಡಬೇಕಿದೆ ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್) ಯ ಹಿರಿಯ ಉಪನ್ಯಾಸಕರು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸದಸ್ಯ ಕೆ.ವಿ.ಸುರೇಶ್ ಹೇಳಿದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಘಟಕದ ಸಹಯೋಗದೊಂದಿಗೆ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜೆ.ಸಿ.ಬೋಸ್ ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ , ಎಸ್.ಡಿ.ಎಂ.ಸಿ. ಸಂಯುಕ್ತಾಶ್ರಯದಲ್ಲಿ ಶಾಲೆಯಲ್ಲಿ “ನಮ್ಮ ನಡೆ ಹಸಿರೆಡೆಗೆ” ಎಂಬ ಧ್ಯೇಯ ವಾಕ್ಯದಡಿ ಏರ್ಪಡಿಸಿದ್ದ ‘ ವಿಶ್ವ ಪ್ರಕೃತಿ ಸಂರಕ್ಷಣಾ ದಿನ’ ದ ಸಂದರ್ಭದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಆರೋಗ್ಯ ಹಾಗೂ ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸುವುದು ಅವಶ್ಯಕ ಎಂದರು.
ವಿಶ್ವ ಪ್ರಕೃತಿ ಸಂರಕ್ಷಣಾ ದಿನ’ ದ ಮಹತ್ವ ವಿವರಿಸಿ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಕೃತಿಯ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ ಎಂದರು.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳನ್ನು ರಕ್ಷಿಸಲು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವುದು ಅವಶ್ಯಕ. ಎಲ್ಲರೂ ಜೊತೆಯಾಗಿ ಪ್ರಕೃತಿಯನ್ನು ಉಳಿಸುವ ಸಂಕಲ್ಪ ಮಾಡಬೇಕಿದೆ ಎಂದರು.
ಡಯಟ್ ಉಪನ್ಯಾಸಕ ಕೆ.ಜಿ.ನೀಲಕಂಠಪ್ಪ ಮಾತನಾಡಿ,ಪ್ರಕೃತಿ, ಪರಿಸರ ಮತ್ತು ಶಕ್ತಿಯ ಸಂರಕ್ಷಣೆಯ ಬಳಕೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ ಎಂದರು.
ಕೂಡಿಗೆ ಡಯಟ್ ಉಪನ್ಯಾಸಕಿ ಕೆ.ಎಸ್.ನಳಿನಾಕ್ಷಿ ಮಾತನಾಡಿ, ಪ್ರತಿಯೊಬ್ಬರೂ ಪರಿಸರವನ್ನು ಬುದ್ದಿವಂತಿಕೆಯಿಂದ ಉಪಯೋಗಿಸಬೇಕಿದೆ ಎಂದರು.
ಡಯಟ್ ಉಪನ್ಯಾಸಕ ವಿ ವಿಜಯ್ ಮಾತನಾಡಿ, ನಾವು ಪರಿಸರದಲ್ಲಿ ಹೆಚ್ಚು ಗಿಡ-ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಭೂಮಿಯನ್ನು ಹಸಿರು ಮಾಡುವ ಸಂಕಲ್ಪ ತೊಡಬೇಕಿದೆ ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂ.ಟಿ.ದಯಾನಂದ ಪ್ರಕಾಶ್, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಎನ್.ಎಸ್.ಎಸ್.ಘಟಕದ ಸಂಚಾಲಕ ಡಿ.ರಮೇಶ್, ಶಿಕ್ಷಕ ಗೋಪಾಲಕೃಷ್ಣ, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಇದ್ದರು.
ಶಿಕ್ಷಕಿ ಪಿ.ಅನಿತಾಕುಮಾರಿ ಸ್ವಾಗತಿಸಿದರು.ಶಿಕ್ಷಕಿ ಅನ್ಸಿಲಾ ರೇಖಾ ವಂದಿಸಿದರು.
ಕೊನೆಯಲ್ಲಿ ‘ ನಾವು ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸೋಣ ಬನ್ನಿ’ ಎಂದು ಸಂಕಲ್ಪ ಮಾಡಲಾಯಿತು.