ವಿರಾಜಪೇಟೆಯಲ್ಲಿ ಎ.ಎಸ್. ಪೊನ್ನಣ್ಣರಿಂದ ದಿನಸಿ ಕಿಟ್ ವಿತರಣೆ

02/08/2021

ಮಡಿಕೇರಿ ಆ.2 : ಅಸಂಘಟಿತ ಕಾರ್ಮಿಕ ವಲಯ ಮತ್ತು ವಿಶೇಷ ಚೇತನರು ಕೋವಿಡ್‍ನ ಈ ಸಂದಿಗ್ಧ ಅವಧಿಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡುವುದು ಮಾನವ ಧರ್ಮವಾಗಿದೆಯೆಂದು ಕೆ.ಪಿ.ಸಿ.ಸಿ. ಕಾನೂನು, ಮಾನವ ಹಕ್ಕು ಆರ್.ಟಿ.ಐ. ಘಟಕದ ರಾಜ್ಯಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ. ವಕ್ತಾರರಾದ ಎ,ಎಸ್. ಪೊನ್ನಣ್ಣ ಹೇಳಿದರು.

ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು, ಚೆಂಬೆಬೆಳ್ಳೂರು, ಬೇಟೋಳಿ, ಕಾಕೋಟುಪರಂಬು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿಶೇಷ ಚೇತನರಿಗೆ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತಿಂಗಳಿಗಾಗುವ ಅಗತ್ಯ ವಸ್ತುಗಳನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವಿತರಿಸಲಾಗುತ್ತಿದೆ ಎಂದರು.

ಸತತ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕದಿಂದ ಶ್ರೀಸಾಮಾನ್ಯರ ಜೀವನದ ಶೈಲಿಯೇ ಬದಲಾವಣೆಯಾಗಿದೆ. ಇದನ್ನು ಅರಿತು ಸುಮಾರು ಕಳೆದ ಸಾಲಿನಲ್ಲಿ ಎಂಟು ಸಾವಿರ ಕಿಟ್ ವಿತರಿಸಲಾಗಿದೆ, ಅದೇ ರೀತಿಯಲ್ಲಿ ಪ್ರಸ್ತುತ ಸಾಲಿನಲ್ಲೂ ಸೇವಾ ಕಾರ್ಯ ಮುಂದುವರಿಸಲಾಗಿದೆ. ಕಿಟ್ ವಿತರಣೆ ಅಲ್ಲದೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ನಂತೆ ತನ್ನ ಪೋಷಕರ ದತ್ತಿನಿಧಿಯ ಮೂಲಕ ಅರ್ಥಿಕ ಸಹಾಯ ನೀಡಲಾಗುತ್ತಿದೆಯೆಂದು ತಿಳಿಸಿದರು.

ಬೇಟೋಳಿಯ ವಲಯ ಕಾಂಗ್ರೆಸ್ ಅಧ್ಯಕ್ಷ ವರ್ಗಿಸ್, ಕೆದಮುಳ್ಳೂರು ವಲಯ ಅಧ್ಯಕ್ಷ ಮಹೇಶ್, ಕಾಕೋಟುಪರಂಬು ವಲಯ ಅಧ್ಯಕ್ಷ ಮಂಡೇಟಿರ ಅನಿಲ್, ಚೆಂಬೆಬೆಳ್ಳೂರು ವ್ಯಾಪ್ತಿಯಲ್ಲಿ ರಘು ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಒಟ್ಟಾಗಿ ಸುಮಾರು 300 ಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ನವೀನ್, ಜಿಲ್ಲಾ ಕಾನೂನು ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮ, ಪಟ್ಟಣ ಪಂಚಾಯ್ತಿ ಸದಸ್ಯರಾದ ಮೊಹಮ್ಮದ್ ರಾಫಿ, ರಾಜೇಶ್ ಪದ್ಮನಾಭ, ಸೇವಾ ದಳದ ಪ್ರಮುಖರಾದ ಥೆರೆಜಾ ವಿಕ್ಟರ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಫಲಾನುಭವಿಗಳು ಹಾಜರಿದ್ದರು.