ಕೊಡಗಿನಲ್ಲಿ ಮುಂದಿನ 10 ವರ್ಷ ಬೃಹತ್ ಯೋಜನೆಗಳಿಗೆ ನಿರ್ಬಂಧ

02/08/2021

ಮಡಿಕೇರಿ ಆ.2 : ಅತಿವೃಷ್ಟಿ ಹಾನಿಯಿಂದ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕೊಡಗಿನಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾಕೃತಿಕ ಅಸಮಾತೋಲನವನ್ನು ತಪ್ಪಿಸಲು ಮುಂದಿನ 10 ವರ್ಷಗಳ ಕಾಲ ಯಾವುದೇ ಬೃಹತ್ ಯೋಜನೆಗಳಿಗೆ ಅವಕಾಶವಿಲ್ಲದಂತೆ ಸರ್ಕಾರ ವಿಶೇಷ ಆದೇಶವನ್ನು ಹೊರಡಿಸಬೇಕೆಂದು ಎಐಸಿಸಿ ವಕ್ತಾರ ಹಾಗೂ ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ಹೊಸ್ಕೇರಿ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಹತ್ತು ವರ್ಷಗಳ ವರೆಗೆ ಕೊಡಗಿನಲ್ಲಿ ಈ ರೀತಿಯ ಬೃಹತ್ ಯೋಜನೆಗಳಿಗೆ ಅವಕಾಶ ನೀಡಬಾರದೆಂದು ಆಗ್ರಹಿಸಿದರು.
ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿಯಿಂದ ಸಂಭವಿಸಿದ ಜಲಸ್ಫೋಟ, ಪ್ರವಾಹ ಮತ್ತು ಭೂಕುಸಿತದಿಂದ ಸಾಕಷ್ಟು ಹಾನಿಯಾಗಿದೆ. ಬೃಹತ್ ಯೋಜನೆಗಳಿಂದ ಕೊಡಗಿನಲ್ಲಿ ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದೆ. ಹೀಗಿದ್ದರೂ ಜಿಲ್ಲೆಯ ಭೌಗೋಳಿಕ ವಿನ್ಯಾಸಕ್ಕೆ ವಿರುದ್ಧವಾಗಿ ಬೃಹತ್ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಗೆ ಮಾರಕವಾಗಬಲ್ಲ ಬೃಹತ್ ಯೋಜನೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪರಿಸರ ಮತ್ತು ಸ್ಥಳೀಯ ಜನರ ಹಿತದೃಷ್ಟಿಯಿಂದ ಹೊಸ್ಕೇರಿಯ ಉದ್ದೇಶಿತ ಶಿಕ್ಷಣ ಸಂಸ್ಥೆಯ ಯೋಜನೆಗೆ ಅನುಮತಿ ನೀಡಬಾರದು ಎಂದು ಬ್ರಿಜೇಶ್ ಕಾಳಪ್ಪ ಆಗ್ರಹಿಸಿದರು.
ತಲೆತಲಾಂತರಗಳಿಂದ ನಮ್ಮ ಪೂರ್ವಜರು ರಕ್ಷಿಸಿಕೊಂಡು ಬಂದಿರುವ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆೆ. ಪರಿಸರ ಪೂರಕ ಶಿಕ್ಷಣ ಎಂಬ ಹೆಸರನ್ನು ಮುಂದಿಟ್ಟುಕೊಂಡು ಮರಗಳನ್ನು ಕಡಿದು ಪರಿಸರ ಶಾಲೆ ಸ್ಥಾಪಿಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಪ್ರಕೃತಿಯನ್ನೇ ಆರಾಧಿಸುವ ಕೊಡಗಿನ ಜನರಿಗೆ ಪರಿಸರ ಶಿಕ್ಷಣದ ಅನಿವಾರ್ಯತೆ ಇಲ್ಲ, ಅಲ್ಲದೆ ಹೊಸ್ಕೇರಿ ಭಾಗದಲ್ಲಿ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಯಂತಹ ಬೃಹತ್ ಯೋಜನೆ ಸೂಕ್ತವಲ್ಲ. ಸುಮಾರು 500 ಮಂದಿ ತಂಗುವ ಶಿಕ್ಷಣ ಸಂಸ್ಥೆಗೆ ಪ್ರತಿದಿನ ಸಾವಿರಾರು ಲೀಟರ್ ನೀರು ಬೇಕಾಗುತ್ತದೆ. ಈ ನೀರನ್ನು ಉದ್ದೇಶಿತ ಯೋಜನೆಯ ಎತ್ತರದ ಭಾಗದಲ್ಲಿ ಟ್ಯಾಂಕ್ ನಿರ್ಮಿಸಿ ಸಂಗ್ರಹ ಮಾಡುವ ಚಿಂತನೆ ಇದೆ ಎಂದು ತಿಳಿದು ಬಂದಿದೆ. ಹೀಗೆ ಮಾಡುವುದರಿಂದ ಸದಾ ಶೀತ ವಾತಾವರಣ ನೆಲೆಸಿ ಎತ್ತರದ ಪ್ರದೇಶ ಕುಸಿದು ಬೀಳುವ ಸಾಧ್ಯತೆಗಳಿದೆ.
ಬೃಹತ್ ಕಟ್ಟಡಗಳು ಮಾತ್ರವಲ್ಲದೆ ಹೆಲಿಪ್ಯಾಡ್ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ. ಈ ರೀತಿಯ ಯೋಜನೆಗಳಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿದೆ. ಭಾಗಮಂಡಲದಲ್ಲಿ ಇಂಗು ಗುಡಿಗಳನ್ನು ನಿರ್ಮಿಸಿ ಕಳೆದ ಬಾರಿ ನಡೆದ ಸಾವು, ನೋವು, ಅನಾಹುತಗಳು ಕಣ್ಣ ಮುಂದೆ ಇರುವಾಗಲೇ ಮತ್ತೆ ಹೊಸ್ಕೇರಿಯ ಬೆಟ್ಟ ಪ್ರದೇಶದಲ್ಲಿ ಬೃಹತ್ ಯೋಜನೆಗೆ ಅನುಮತಿ ನೀಡಲು ಮುಂದಾಗಿರುವುದು ಖಂಡನೀಯ. ಒಂದು ವೇಳೆ ಸ್ಥಳೀಯ ಗ್ರಾಮಸ್ಥರ ವಿರೋಧದ ನಡುವೆ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ ಅವಕಾಶ ನೀಡಿದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಬ್ರಿಜೇಶ್ ಕಾಳಪ್ಪ ಎಚ್ಚರಿಕೆ ನೀಡಿದರು.
ಈ ಯೋಜನೆಯಿಂದ ಅನಾಹುತಗಳು ಸಂಭವಿಸುವ ಸಾಧ್ಯತೆಗಳೇ ಹೆಚ್ಚಾಗಿದ್ದು, ಕಳೆದ 3 ವರ್ಷಗಳ ಅತಿವೃಷ್ಟಿ ಹಾನಿ ಪುನರಾವರ್ತನೆಯಾಗುವ ಆತಂಕವಿದೆ ಎಂದರು.
ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಹೊಸ್ಕೇರಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಅವಕಾಶ ನೀಡಬಾರದೆಂದು ಸುದ್ದಿಗೋಷ್ಠಿಯಲ್ಲಿದ್ದ ಹೊಸ್ಕೇರಿ ಗ್ರಾಮದ ಪ್ರಮುಖರಾದ ಡಾ.ಪುಷ್ಪಾಕುಟ್ಟಣ್ಣ, ಬಲ್ಲಚಂಡ ಅಯ್ಯಪ್ಪ, ಕಿಶುಉತ್ತಪ್ಪ, ಬಲ್ಲಚಂಡ ಸಂತೋಷ್, ಕಾವೇರಿ ಬೋಪಣ್ಣ ಮತ್ತಿತರರು ಒತ್ತಾಯಿಸಿದರು.