ಸೌಹಾರ್ದತೆಯ ಕೊಡಗಿನಲ್ಲಿ ಅಶಾಂತಿ ಸೃಷ್ಟಿ ಬೇಡ : ಎಸ್ ವೈ ಎಸ್ ಮನವಿ

02/08/2021

ಮಡಿಕೇರಿ ಆ.2 : ಸೌಹಾರ್ದತೆಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಯಾರೂ ಶಾಂತಿ ಕದಡಲು ಯತ್ನಿಸಬಾರದು ಎಂದು ಮನವಿ ಮಾಡಿರುವ ಎಸ್ ವೈ ಎಸ್ ಸಂಘಟನೆ, ಅಪಘಾತ ಪ್ರಕರಣವನ್ನು ಮುಂದಿಟ್ಟುಕೊಂಡು ಅಶಾಂತಿ ಮೂಡಿಸುವುದು ಖಂಡನೀಯವೆಂದು ತಿಳಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ವೈಎಸ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎಂ.ಹಮೀದ್ ಮುಸ್ಲಿಯಾರ್, ಪ್ರಮುಖರಾದ ಕೆ.ಐ.ರಫೀಕ್ ಹಾಜಿ ಹಾಗೂ ಅಣ್ಣ ಷರೀಫ್ ಅಪಘಾತಗಳು ನಿತ್ಯ ನಡೆಯುತ್ತಲೇ ಇರುತ್ತವೆ, ಅದೇ ಪ್ರಕಾರವಾಗಿ ಬೋಯಿಕೇರಿಯಲ್ಲೂ ಎರಡು ಕಾರುಗಳ ನಡುವೆ ಆಕಸ್ಮಿಕವಾಗಿ ಡಿಕ್ಕಿ ಸಂಭವಿಸಿದೆ. ಇದನ್ನೇ ದೊಡ್ಡದು ಮಾಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲವೆಂದು ಹೇಳಿದ್ದಾರೆ.
ಮಳೆ ಮತ್ತು ಮಂಜಿನ ವಾತಾವರಣದಲ್ಲಿ ಈ ಘಟನೆ ನಡೆದಿದ್ದು, ಸಹಜವಾಗಿಯೇ ಎರಡೂ ಕಡೆಯವರಿಂದ ಪರಸ್ಪರ ಮಾತಿಗೆ ಮಾತು ಬೆಳೆದು ಸಣ್ಣಪುಟ್ಟ ಘರ್ಷಣೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇದನ್ನು ಮುಂದಿಟ್ಟುಕೊಡು ಕಾನೂನನ್ನು ಕೈಗೆತ್ತಿಕೊಂಡು ಅಶಾಂತಿಗೆ ಯತ್ನಿಸುತ್ತಿರುವುದು ಖಂಡನೀಯ. ಕೊಡಗು ಜಿಲ್ಲೆ ಈಗಾಗಲೇ ನೆರೆಹಾವಳಿ, ಭೂಮಿ ಕುಸಿತ ಹಾಗೂ ಕೋವಿಡ್ ಸೋಕಿನಿಂದ ತತ್ತರಿಸಿ ಹೋಗಿದೆ. ಜನಸಾಮಾನ್ಯರು ನಿತ್ಯ ಬದುಕಿಗೆ ಕಷ್ಟಪಡುತ್ತಿದ್ದಾರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವಾಗಬೇಕು.
ಇದನ್ನು ಬಿಟ್ಟು ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ನೂರಾರು ಜನರನ್ನು ಸೇರಿಸಿ ಗಂಟೆಗಟ್ಟಲೆ ರಸ್ತೆಗಳನ್ನು ಬಂದ್ ಮಾಡಿ ರೋಗಿಗಳಿಗೆ, ಜನಸಾಮಾನ್ಯರಿಗೆ ತೊಂದರೆ ನೀಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ನಿರ್ದಿಷ್ಟ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಿ ಗಲಭೆಗಳಿಗೆ ಪ್ರಚೋದನೆ ನೀಡಿರುವುದಲ್ಲದೆ ಹೊರ ಜಿಲ್ಲೆಗಳಿಂದಲೂ ಜನರನ್ನು ಕರೆಯಿಸಿರುವುದನ್ನು ಗಮನಿಸಿದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ ಎನ್ನುವ ಸಂಶಯ ಮೂಡುತ್ತಿದೆ ಎಂದು ಪ್ರಮುಖರು ಆರೋಪಿಸಿದ್ದಾರೆ.
ದೇಶವನ್ನು ಕಾಯುವ ಯೋಧರನ್ನು ಪ್ರತಿಯೊಬ್ಬರು ಗೌರವಿಸುತ್ತಾರೆ, ಎಲ್ಲಾ ಜಾತಿ ಧರ್ಮದ ಕುಟುಂಬದಲ್ಲಿಯೂ ಯೋಧರಿದ್ದಾರೆ. ಅಪಘಾತ ನಡೆದ ಎರಡೂ ಕುಟುಂಬದಲ್ಲಿ ಯೋಧರಿದ್ದಾರೆ. ಆದರೆ ಪವಿತ್ರವಾದ ಯೋಧನ ಹೆಸರು ಬಳಸಿ ಸಮಾಜದಲ್ಲಿ ಸಂಘರ್ಷವನ್ನು ಸೃಷ್ಟಿ ಮಾಡುವುದು ಯಾರಿಗೂ ಶೋಭೆ ತರುವಂತಹದ್ದಲ್ಲ. ಯಾರೂ ಯೋಧರ ಹೆಸರಿಗೆ ಕಳಂಕ ತರಬಾರದು ಎಂದು ಅವರುಗಳು ಮನವಿ ಮಾಡಿದ್ದಾರೆ.
ಜಿಲ್ಲೆಯ ಶಾಂತಿ, ಸೌಹಾರ್ದತೆಗೆ ಮತ್ತು ಅಭಿವೃದ್ಧಿಗೆ ದಕ್ಕೆ ತರುವ ಶಕ್ತಿಗಳ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕು ಮತ್ತು ಪೊಲೀಸರು ಕಟ್ಟೆಚ್ಚರ ವಹಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಸಿ.ಎಂ.ಹಮೀದ್ ಮುಸ್ಲಿಯಾರ್ ಒತ್ತಾಯಿಸಿದ್ದಾರೆ.