ವಿಶ್ವ ಸ್ತನ್ಯಪಾನ ಸಪ್ತಾಹ : ತಾಯಿಯ ಎದೆಹಾಲು ಶಿಶುವಿಗೆ ಅಮೃತವಿದ್ದಂತೆ : ಡಾ.ಕಾರ್ಯಪ್ಪ

05/08/2021


ಮಡಿಕೇರಿ ಆ.5 : ತಾಯಂದಿರಿಗೆ ಎದೆಹಾಲಿನ ಅರಿವು ಮೂಡಿಸುವ ಸಲುವಾಗಿ ಕೊಡಗು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹವು ನಗರದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಕಾರ್ಯಪ್ಪ ಅವರು ಶಿಶುಗಳಿಗೆ ತಾಯಿಯ ಎದೆಹಾಲು ನೀಡುವುದರಿಂದ ತಾಯಿ ಮತ್ತು ಮಗುವಿನ ಸಂಬಂಧ ಹಾಗೂ ಆರೋಗ್ಯ ಉತ್ತಮ ರೀತಿಯಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ. ತಾಯಿಯ ಎದೆಹಾಲಿನ ಮಹತ್ವದ ಅರಿವು ಮೂಡಿಸುವುದು ಇಂದಿನ ಪೀಳಿಗೆಗೆ ಅವಶ್ಯಕವಾಗಿದೆ. ಹಾಲುಣಿಸುವ ಪ್ರಕ್ರಿಯೆಯಿಂದ ಮಗುವಿಗೆ ಮಾತ್ರವಲ್ಲದೆ ತಾಯಿಯ ಆರೋಗ್ಯಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಅವರು ಮಾತನಾಡಿ ಭಾರತ ಸರ್ಕಾರದ ವತಿಯಿಂದ ವಿಶ್ವ ಸ್ತನ್ಯಪಾನ ದಿನಾಚರಣೆ ಆಚರಿಸಲಾಗುತ್ತಿದ್ದು, ಜನರಿಗೆ ತಾಯಿಯ ಎದೆಹಾಲಿನ ಮಹತ್ವವನ್ನು ತಿಳಿಸುವುದು ಇದರ ಉದ್ದೇಶವಾಗಿದೆ. ತಾಯಿಯ ಎದೆಹಾಲು ಅಮೃತವಿದ್ದಂತೆ, ಅದರಲ್ಲಿ ಮಗುವಿಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ದೊರೆಯುತ್ತದೆ ಹಾಗೂ ಲಸಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ತಾಯಿಯ ಹಾಲಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಮಕ್ಕಳ ವಿಭಾಗ ಮುಖ್ಯಸ್ಥರಾದ ಡಾ.ಪುರುಷೋತ್ತಮ ಅವರು ಮಾತನಾಡಿ, ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ 2 ವಾರದ ಓಆರ್‍ಎಸ್ ಹಾಗೂ ಸ್ತನ್ಯಪಾನ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಓಅರ್‍ಎಸ್ ಮಗುವಿನ ಹತ್ತು ಹಲವು ಅನಾರೋಗ್ಯಕ್ಕೆ ರಾಮಬಾಣವಾಗಿದೆ. ವಾಂತಿ, ಬೇದಿಯಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.
ಸಪ್ತಾಹ ಪ್ರಯುಕ್ತ ವೈಯಕೀಯ ವಿದ್ಯಾರ್ಥಿಗಳಿಗೆ ಕವನ ರಚನೆ, ಪ್ರಬಂಧ ರಚನೆ, ಚಿತ್ರಕಲೆ ಹಾಗೂ ನಾಟಕ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಡಾ.ಅನುಶ್ರೀ ಅವರ ನೇತೃತ್ವದಲ್ಲಿ ನಾಟಕ ಪ್ರದರ್ಶನ ಮಾಡಲಾಯಿತು.
ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಡಾ.ರೂಪೇಶ್ ಗೋಪಾಲ್, ಮಡಿಕೇರಿ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಮಂಜುನಾಥ್ ಇತರರು ಇದ್ದರು.