ಕಣ್ಣಿನ ಆರೋಗ್ಯಕ್ಕೆ ಸ್ಪೆಷಲ್ ಆರೈಕೆ ಹೀಗಿರಲಿ…

24/08/2021

ಪರಿಸರವು ಪ್ರತಿ ಜೀವಿಗೂ ನೀಡಿದ ಅತ್ಯಮೂಲ್ಯ ವರ ‘ದೃಷ್ಟಿ. ಯಾಕೆಂದರೆ ದೃಷ್ಟಿ ಇದ್ದರೆ ಮಾತ್ರ ಎಲ್ಲವನ್ನೂ ವೀಕ್ಷಿಸಲು ಸಾಧ್ಯ. ನಮ್ಮ ಜೀವನ ನಿರ್ವಹಣೆಗೆ ದೃಷ್ಟಿ ಅವಶ್ಯಕ. ಆದ್ದರಿಂದ ಕಣ್ಣುಗಳ ಬಗ್ಗೆ ಅಪಾರ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ, ಮತ್ತು ಅದು ಅನಿವಾರ್ಯವಾಗಿದೆ. ಆಳವಾದ ವೈದ್ಯಕೀಯ ಜ್ಞಾನ ಇಲ್ಲದಿದ್ದರೂ ಪ್ರತಿಯೊಬ್ಬರೂ ಕಣ್ಣಿನ ರಚನೆ, ಕಾರ್ಯನಿರ್ವಹಣೆ, ಸಾಮಾನ್ಯ ನೇತ್ರರೋಗಗಳು, ಕಣ್ಣಿನ ಮುನ್ನೆಚ್ಚರಿಕಾ ಸಂರಕ್ಷಣೆಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿರುವುದು ಉಪಯುಕ್ತವಾಗಿದೆ.

ನಾವು ಆರೋಗ್ಯಕರ ಕಣ್ಣುಗಳನ್ನು ಕಾಪಾಡಿಕೊಳ್ಳಬೇಕಾದರೆ ನಾವು ಒಂದೆರಡು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ದಿಸೆಯಲ್ಲಿ ನಾವು ಮೊದಲು ನಮ್ಮ ಕಣ್ಣುಗಳು ಅಗತ್ಯವಾಗಿ ಆರೋಗ್ಯಕರ ಸ್ಥಿತಿಯಲ್ಲಿ ಇರಬೇಕೆಂದರೆ ನಮ್ಮ ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳನ್ನು ಸೇವಿಸಿದರೆ ಮಾತ್ರ ಸಾಧ್ಯ.

ತಣ್ಣಗಿನ ಶುದ್ಧ ನೀರಿನಲ್ಲಿ ದಿನಕ್ಕೆ ಎರಡರಿಂದ ಮೂರು ಬರಿ ಕಣ್ಣನ್ನು ಸ್ವಚ್ಛಗೊಳಿಸಬೇಕು.
ಬೇಸಿಗೆಯಲ್ಲಿ ಹೆಚ್ಚಾಗಿ ಎಸಿ ಮತ್ತು ಫ್ಯಾನುಗಳನ್ನು ಬಳಸುತ್ತೇವೆ. ಇದರಿಂದಾಗಿ ಕಣ್ಣುಗಳು ಬೇಗ ಒಣಗುತ್ತವೆ. ಆದಷ್ಟು ಎಸಿ ಅಥವಾ ಫ್ಯಾನಿನ ಗಾಳಿ ನೇರವಾಗಿ ಕಣ್ಣಿಗೆ ತಗುಲದಂತೆ ನೋಡಿಕೊಳ್ಳಬೇಕು.
ಬಿಸಿಲಿನಲ್ಲಿ ಓಡಾಡುವಾಗ ಗಾಗಲ್ಸ್ ಬಳಸುವುದು ಮತ್ತು ದ್ವಿಚಕ್ರ ಸವಾರರು ಆದಷ್ಟು ಮುಚ್ಚಿರುವ ಹೆಲ್ಮೆಟ್‍ಗಳನ್ನು ಬಳಸುವುದು ಉತ್ತಮ.

ಮಡ್ರಾಸ್ ಐ ಎಂಬುದು ಬೇಸಿಗೆಯಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಹಾಗಾಗಿ ಧೂಳಿನ ಕೈಗಳನ್ನು ಸ್ವಚ್ಛ ಮಾಡಿದ ನಂತರವೇ ಕಣ್ಣನ್ನು ಮುಟ್ಟಬೇಕು. ಯಾವುದೇ ಕಾರಣಕ್ಕೂ ಕೊಳಕು ಕೈಗಳಿಂದ ಕಣ್ಣು ಮುಟ್ಟಿಕೊಳ್ಳಬಾರದು.
ಕಣ್ಣುಗಳನ್ನು ಕ್ಲೀನ್ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಅಲ್ಲದೇ ಕಣ್ಣಿಗೆ ಧೂಳು ಅಥವಾ ಕಸ ಬಿದ್ದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬಾರದು. ಮೊದಲು ಸ್ವಚ್ಛ ನೀರು ಅಥವಾ ಬಟ್ಟೆಯಿಂದ ಒರೆಸಿ ನಂತರ ನೇತ್ರತಜ್ಞರನ್ನು ಕಾಣುವುದರಿಂದ ಹೆಚ್ಚಿನ ಅಪಾಯ ಆಗುವುದನ್ನು ತಪ್ಪಿಸಬಹುದು.
ಮನೆ ಅಥವಾ ಕಚೇರಿಯಲ್ಲಿ ಯಾರಿಗಾದರೂ ಕಣ್ಣಿನ ಸೋಂಕು ತಗುಲಿದೆ ಎಂದರೆ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ, ಸೋಂಕು ಬಹುಬೇಗ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳಿರುತ್ತವೆ.

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು 7 ಉಪಯುಕ್ತ ಸಲಹೆಗಳು :

ಅತ್ಯಂತ ಪ್ರಮುಖವಾದ ಪೌಷ್ಟಿಕಾಂಶಗಳೆಂದರೆ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಸಿ, ಸತು (Zinc), ಲ್ಯೂಟೈನ್ (Lutein- ಕೆಲವು ಹಸಿರು ಸೊಪ್ಪಿನಲ್ಲಿ ದೊರಕುವ ಅಂಶ), ಜಿಯಾಕ್ಸಂತಿನ್ (Zeaxanthin – ಒಂದು ರೀತಿಯ ಕ್ಯಾರಾಟೇನ್ ಆಲ್ಕೋಹಾಲು ಮತ್ತು ಕೆಲವು ಸಸ್ಯಗಲ್ಲಿ ದೊರಕುವ ಪೌಷ್ಟಿಕಾಂಶ)

ಮೊಟ್ಟೆಗಳು : ಮೊಟ್ಟೆಯನ್ನು ಒಂದು ಸಂಪೂರ್ಣ ಆಹಾರವೆಂದು ಪರಿಗಣಿಸಬಹುದು. ನಿಮ್ಮ ಉಪಹಾರಕ್ಕೆ ಒಂದು ಮೊಟ್ಟೆಯನ್ನು ಸೇರಿಸಿದರೆ ನಿಮ್ಮ ದಿನಪೂರ್ತಿ ಅಗತ್ಯವಿರುವ ವಿಟಮಿನ್‌ಗಳ ಮತ್ತು ಜೀವಸತ್ವಗಳ ಪೂರೈಕೆಯಾಗುತ್ತದೆ. ಮೊಟ್ಟೆಯು ಲ್ಯೂಟೈನ್ ಮತ್ತು ಜಿಯಾಕ್ಸಂತಿನ್‌ಗಳ ಉತ್ತಮ ಮೂಲವಾಗಿದ್ದು ನಿಮ್ಮ ಕಣ್ಣುಗಳಿಗೆ ಅಗತ್ಯವಿರುವ ರಕ್ಷಣೆ ಕೊಡುತ್ತದೆ.

ಪಾಲಕ್ ಸೊಪ್ಪು :  ಮೊಟ್ಟೆಯಂತೆಯೇ, ಪಾಲಕ್ ಮತ್ತು ಇತರ ಹಸಿರು ಸೊಪ್ಪುಗಳು ಸಹ ಲ್ಯೂಟೈನ್ ಮತ್ತು ಜಿಯಾಕ್ಸಂತಿನ್‌ಗಳ ಉತ್ತಮ ಮೂಲವಾಗಿದೆ. ಇವೆರಡು ಪೌಷ್ಟಿಕಾಂಶಗಳು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಅವನತಿ ಸಮಸ್ಯೆಗಳಿಗೆ ಉತ್ತಮ ರಕ್ಷಣೆ ಕೊಡುತ್ತವೆ.

ಕ್ಯಾರೆಟ್ :   ಮೊಲಗಳಿಗೆ ಇರುವ ಗಾಢವಾದ ಮತ್ತು ತೀಕ್ಷ್ಣವಾದ ಕಣ್ಣುಗಳನ್ನು ಪಡೆಯಬೇಕಾದರೆ ನಿಮ್ಮ ಕ್ಯಾರೆಟ್ ಸೇವನೆಯನ್ನು ಹೆಚ್ಚಿಸಿ. ಈ ಕಿತ್ತಲೆ ಬಣ್ಣದ ಕ್ಯಾರೆಟ್ಟಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳ ಗುಂಪಿಗೆ ಸೇರಿದೆ.

ಬೀಟ್‌ರೂಟ್ :  ಇದು ಮತ್ತೋಂದು ವಿಟಮಿನ್ ಎ ಸಮೃದ್ಧವಾಗಿ ಇರುವ ಬೇರಿನ ಜಾತಿಯ ಆಹಾರ. ನಿಮ್ಮ ಕಣ್ಣುಗಳು ಉತ್ಸಾಹಭರಿತ ಮತ್ತು ಸಂತೋಷದಿಂದ ಕೂಡಿರಬೇಕಾದಲ್ಲಿ ಈ ಬೀಟ್‌ರೂಟ್ ತರಕಾರಿಯನ್ನು ಸಾಕಷ್ಟು ಸೇವಿಸಬೇಕು.

ಬಾದಾಮಿ :  ಇದು ಕಣ್ಣುಗಳಿಗೆ ಉತ್ತಮ ಆಹಾರ. ವಿಟಮಿನ್ ಇ ಮತ್ತು ಏಕಾಪರ್ಯಾಪ್ತ ಕೊಬ್ಬಿನಾಮ್ಲಗಳ (Monounsaturated fatty acids) ಬಾದಾಮಿಯಲ್ಲಿ ಸಮೃದ್ಧವಾಗಿದ್ದು ಕಣ್ಣುಗಳನ್ನು ಯುವ ವಯಸ್ಸಿನ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿಟ್ಟುಕೊಂಡಿರಲು ಸಹಾಯವಾಗುತ್ತದೆ. ನೀವೇನೂ ಅತಿ ಹೆಚ್ಚು ಬಾದಾಮಿಯನ್ನು ಸೇವಿಸಬೇಕಾಗಿಲ್ಲ. ದಿನಕ್ಕೆ 8 ರಿಂದ 10 ಬಾದಾಮಿಯನ್ನು ತೆಗೆದುಕೊಂಡರೆ ನಿಮ್ಮ ಅಗತ್ಯ ಪೂರೈಸುತ್ತದೆ.

ಬ್ರೊಕೋಲಿ : ದಟ್ಟ ಹಸಿರುಬಣ್ಣದ ಬ್ರೊಕೋಲಿಯಲ್ಲಿ ವಿಟಮಿನ್ ಸಿ, ಲ್ಯೂಟೈನ್ ಮತ್ತು ಜಿಯಾಕ್ಸಂತಿನ್‌ಗಳು ಸಮೃದ್ಧಿಯಾಗಿವೆ. ಹೀಗಿದ್ದಾಗ ಇದನ್ನು ಬಿಟ್ಟು ಕಣ್ಣುಗಳಿಗೆ ಬೇರೆ ಯಾವ ಉತ್ತಮ ಆಹಾರವನ್ನು ಹುಡುಕಬೇಕು? ಒಂದು ಮರದ ರೂಪದಲ್ಲಿರುವ ತರಕಾರಿಯು ಕಣ್ಣುಗಳಿಗೆ ಉತ್ತಮ ಆರೋಗ್ಯವನ್ನು ಕೊಡುತ್ತದೆಯಾದರೂ ಅದು ತಾಜಾ ತರಕಾರಿಯಾಗಿರಬೇಕು ಎನ್ನುವುದನ್ನು ಗಮನಿಸಿ. ಅದರ ಬಣ್ಣ ಎಷ್ಟು ಗಾಢವಾದಷ್ಟೂ ಅಷ್ಟು ಉತ್ತಮ.

ಪ್ರೋಟೀನ್‌ಯುಕ್ತ ಆಹಾರ : ಸಮುದ್ರಾಹಾರಗಳಲ್ಲಿ ಸಾಲ್ಮನ್ ಮತ್ತು ಸಾರ್ಡೀನ್‌ಗಳು ಪ್ರೋಟೀನ್ ಮತ್ತು ಒಮೇಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳು. ಅವುಗಳಲ್ಲಿ ಉತ್ತಮ ಕಣ್ಣಿಗೆ ಅವಶ್ಯಕವಾದ ಮತ್ತೊಂದು ಖನಿಜಾಂಶವಿರುವ ಸತು (Zinc)  ಸಮೃದ್ಧವಾಗಿ ಇರುತ್ತದೆ. ಹೀಗಾಗಿ ಈ ಸಮುದ್ರದ ಜೀವಿಗಳು ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳ ಗುಂಪಿಗೆ ಸೇರುತ್ತವೆ.

ಸಿಟ್ರಸ್ ಜಾತಿಯ ಹಣ್ಣುಗಳು : ವಿಟಮಿನ್ ಸಿ ಎಂದು ಹೇಳಿದರೆ ಅದು ಸಿಟ್ರಸ್ ಹಣ್ಣುಗಳಲ್ಲಿವೆ ಎಂದು ಗೊತ್ತಿದೆ. ಕಿತ್ತಲೆ ಮತ್ತು ದ್ರಾಕ್ಷಿಹಣ್ಣುಗಳು ತಿನ್ನಲು ರುಚಿಯಾಗಿರುತ್ತದಲ್ಲದೆ ಶೀತ ಮತ್ತು ಕೆಮ್ಮನ್ನು ವಾಸಿಮಾಡುವುದು ಮತ್ತು ಕಣ್ಣುಗಳಿಗೂ ಸಹ ಉತ್ತಮ ಆಹಾರ. ನಾವು ಆಹಾರಗಳ ಜೊತೆ ಸಿಟ್ರಸ್ ಹಣ್ಣುಗಳನ್ನು ಸೇವಿಸಿ ಅಕ್ಷಿಪಟಲದ ಅವನತಿ ಮತ್ತು ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಇವುಗಳಿಂದ ದೂರವಿರಬಹುದು.

ಹುರುಳಿ, ಅವರೆ, ಇತ್ಯಾದಿ ಕಾಳುಗಳು  ; ಎಲ್ಲ ರೀತಿಯ ಕಾಳುಗಳಲ್ಲಿ ಕಣ್ಣುಗಳಿಗೆ ಅಗತ್ಯವಾದ ಸತು ಇರುತ್ತದೆ. ಈ ಖನಿಜ ಸೇವನೆಯಿಂದ ಬೆಳಕಿನ ಹಾನಿಕಾರಕ ಪರಿಣಾಮಗಳಿಂದ ಕಣ್ಣುಗಳನ್ನು ರಕ್ಷಿಸಬಹುದು.

ಟೋಫು :  ಸೋಯಾ ಹಾಲಿನಿಂದ ಟೋಫು‌ವನ್ನು ತಯಾರಿಸುತ್ತಾರೆ. ಸೋಯಾ ಕೂಡ ಒಂದು ದ್ವಿದಳ ಧಾನ್ಯ. ಎಲ್ಲಾ ಕಾಳುಗಳಂತೆಯೆ ಟೋಫು‌ವಿನಲ್ಲಿ ಸತುವಿನ ಅಂಶವು ಉತ್ತಮವಾಗಿದ್ದು ಅದರ ಸೇವನೆಯಿಂದ ಕಣ್ಣುಗಳಿಗೆ ಲಾಭದಾಯಕವಾಗಿರುತ್ತದೆ.