ಶನಿವಾರಸಂತೆ : ತೋಟದಿಂದ ಅಕ್ರಮ ಮರ ಸಾಗಾಟ : ಆರೋಪಿಗಳ ಬಂಧನ

10/09/2021

ಸೋಮವಾರಪೇಟೆ ಸೆ.10 : ಕಾಫಿ ತೋಟದಲ್ಲಿದ್ದ ಮರ ಕಡಿದು ಅಕ್ರಮ ಸಾಗಾಟ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ತೋಟದಲ್ಲಿದ್ದ ಸುಮಾರು 20 ಸಾವಿರ ರೂ. ಮೌಲ್ಯದ ಮರಗಳನ್ನು ಕಳ್ಳತನ ಮಾಡಿದ್ದು,ಈ ಬಗ್ಗೆ ಶನಿವಾರಸಂತೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.
ಹಾಸನ ಜಿಲ್ಲೆಯ ಕೆಂಚಮ್ಮನ ಹೊಸಕೋಟೆ ಸೋಮಶೇಖರ, ಕಿರಿಕೊಡ್ಲಿ ಗ್ರಾಮದ ಪುಟ್ಟಸ್ವಾಮಿ ಹಾಗೂ ಹಾಸನದ ಹೊಸೂರು ಗ್ರಾಮದ ಗೌತಮ್  ಎಂಬುವವರನ್ನು ಬಂಧಿಸಲಾಗಿದೆ.
ವೃತ್ತ ನಿರೀಕ್ಷಕ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಮರ,  ಟಾಟಾ ಸುಮೋ ಮತ್ತು ಒಂದು ಟ್ರಾಕ್ಟರ್ ಸೇರಿದಂತೆ ಸುಮಾರು 4.50 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ  ಶೈಲೇಂದ್ರ ಅವರ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ಶಶಿಧರ್,  ಸಿಬ್ಬಂದಿಗಳಾದ ಲೋಕೇಶ್, ಶಶಿಕುಮಾರ್, ಡಿಂಪಲ್, ಮುರಳಿ, ಷಣ್ಮುಖ ನಾಯಕ, ಧನಂಜಯ ಪಾಲ್ಗೊಂಡಿದ್ದರು.